ಹೊರನಾಡ ಕನ್ನಡಿಗರ ಪರ ಸರ್ಕಾರ ಕಾಳಜಿ ತೋರಲಿ

ಬೀದರ್: ಮಾ.11:ಒಳನಾಡಲ್ಲಷ್ಟೇ ಅಲ್ಲ, ಹೊರನಾಡಲ್ಲಿರುವ ಕನ್ನಡಿಗರ ಅಭಿವೃದ್ಧಿಯ ಜವಾಬ್ದಾರಿಯನ್ನೂ ನಮ್ಮ ಆಡಳಿತಾರೂಢ ಸರ್ಕಾರ ಹೊರಬೇಕು. ಅಂದಾಗ ಮಾತ್ರ ಸಮಸ್ತ ಕನ್ನಡಿಗರು ಭಾಷಾ ಪ್ರೇಮ ಮತ್ತಷ್ಟು ಪಸರಿಸಿ, ಬೆಳೆಸಲು ಸಾಧ್ಯವಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಇಲ್ಲಿನ ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯ ಸಹಯೋಗದಲ್ಲಿ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತೆಲಂಗಾಣದ ಕಾರಾಮುಂಗಿ ಗ್ರಾಮದಲ್ಲಿ ಆಯೋಜಿಸಿದ್ದ ಹೊರನಾಡಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಡಿನಾಡಿನಲ್ಲಿರುವ ಕನ್ನಡಿಗರ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು ತೋರುತ್ತಿರುವ ಅಪಾರ ಕಾಳಜಿ ಗಡಿಯಾಚೆಗಿರುವ ಕನ್ನಡಿಗರ ಮೇಲೆಯೂ ತೋರಲು ಮನವಿ ಮಾಡುತ್ತೇವೆ. ಹೊರನಾಡಿನ ಕನ್ನಡಿಗರ ಪಟ್ಟಿಯಲ್ಲಿ ಸಂಗಾರೆಡ್ಡಿ, ಮೇದಕ್ ಮತ್ತಿತರ ಜಿಲ್ಲೆಗಳನ್ನೂ ಸೇರಿಸಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಿದರಿ ಸಾಂಸ್ಕೃತಿಕ ವೇದಿಕೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಳಕಳಿ ಮಾದರಿಯಾಗಿದೆ. ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಡಿ ಆಚೆಯ ಸಮಸ್ಯೆಗಳ ಮೇಲೆಯೂ ಬೆಳಕು ಚೆಲ್ಲಿ ಸರ್ಕಾರ ಹಾಗೂ ಗ್ರಾಮಗಳ ಮಧ್ಯೆ ಸೇತುವೆಯಾಗುತ್ತಿದೆ ಎಂದರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಕನ್ನಡದ ನೆಲದಲ್ಲಿರುವವರು ಮಾತ್ರ ಕನ್ನಡಿಗರು ಎಂದು ಹೇಳದೆ, ಗಡಿಯಾಚೆಗೂ ಇರುವ ಕನ್ನಡಿಗರ ಸಮಸ್ಯೆಗಳಿಗೆ ಕಿವಿಗೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ಮಾತನಾಡಿ, ಇದು ತೆಲಂಗಾಣದ ನೆಲವಾದರೂ ಇಲ್ಲಿ ನೆಲೆಸಿರುವ ಶೇ 90ರಷ್ಟು ಜನ ಕನ್ನಡ ಮಾತನಾಡುವವರಾಗಿದ್ದಾರೆ ಇಲ್ಲಿನ ಮನೆ, ಅಂಗಡಿಗಳಲ್ಲೆಲ್ಲ ಕನ್ನಡ ಭಾಷೆ ಬಳಸುವುದನ್ನು ಕಂಡರೆ ಮನಸ್ಸು ಪುಳಕಿತವಾಗುತ್ತದೆ ಎಂದರು.

ಗ್ರಾಮ ಪಂಚಾಯತ್ ಸರಪಂಚ್ ಅನಿತಾ ಗುಂಡೇರಾವ್ ಪಾಟೀಲ ಹಾಗೂ ಬಿದರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ಮಾತನಾಡಿದರು.

ಗುರುನಾಥ ಗಡ್ಡೆ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಿಸಿದರು. ಗುರುಕುಲದ ಸ್ಥಾನಿಕ ಅಧ್ಯಕ್ಷ ಶಿವಕುಮಾರ ಗಡ್ಡೆ ವಂದಿಸಿದರು. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಕೆ. ಚಂದ್ರಶೇಖರ, ಗುರುಕುಲದ ಮುಖ್ಯಶಿಕ್ಷಕಿ ಅಂಬಿಕಾ ಸ್ವಾಮಿ, ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.


ಹೊರನಾಡಲ್ಲಿ ಕನ್ನಡಿಗರ ಅದ್ಧೂರಿ ಮೆರವಣಿಗೆ:

ಕಾರಾಮುಂಗಿ ಗ್ರಾಮದ ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢ ಶಾಲೆಯಿಂದ ನೂರಾರು ವಿದ್ಯಾರ್ಥಿಗಳು, ಅವರ ಪಾಲಕ, ಪೆÇೀಷಕರು ಹಾಗೂ ಗ್ರಾಮಸ್ಥರು ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಎತ್ತಿನ ಬಂಡಿಗಳು, ಅಲಂಕೃತ ಟ್ರ್ಯಾಕ್ಟರ್, ತಮಟೆ, ಡೊಳ್ಳು, ಹಗಲು ವೇಷಧಾರಿಗಳು ಗಮನ ಸೆಳೆದರು. ಗ್ರಾಮದ ಅಲ್ಲಲ್ಲಿ ಪೂಜ್ಯರಿಗೆ ಆರತಿ ಎತ್ತಿ ಗ್ರಾಮಸ್ಥರು ಅಭಿಮಾನ ಮೆರೆದರು.

ಬಿದರಿ ಸಾಂಸ್ಕೃತಿಕ ವೇದಿಕೆಯಿಂದ ಸಂಗೀತ ಸಂಜೆ:

ಕಾರಾಮುಂಗಿ ಗ್ರಾಮದ ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿದರಿ ವೇದಿಕೆಯ ರೇಖಾ ಸೌದಿ ನೇತೃತ್ವದಲ್ಲಿ ಸಂಗೀತ ಸಂಜೆ ನಡೆಯಿತು. ಅಮಿತ್ ಜನವಾಡಕರ್, ರಾಜೇಶ ಕುಲಕರ್ಣಿ, ವಿಷ್ಣು ಜನವಾಡಕರ್ ಹಾಗೂ ಪ್ರೇಮ ಗೌಡಗಾಂವೆ ಗಾಯನ ಪ್ರಸ್ತುತಪಡಿಸಿದರೆ, ಜಬ್ಬಾರ್ ಮುರ್ಷಾದ್ ಅವರ ತಂಡ ವಾದ್ಯ ಸಂಯೋಜನೆ ನೆರವೇರಿಸಿತು.

ಕನ್ನಡ ಶಿಕ್ಷಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ:

ಕಾರಾಮುಂಗಿ ಗ್ರಾಮವಷ್ಟೇ ಅಲ್ಲ, ಸುತ್ತಮುತ್ತಲಿನ ಕನ್ನಡ ಶಾಲೆಗಳ ಶಿಕ್ಷಕರು, ತೆಲಂಗಾಣದಲ್ಲಿ ಕನ್ನಡ ಮಾಧ್ಯಮದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರಾಧಿಕಾರದಿಂದ ಬಿದರಿ ಸಾಂಸ್ಕøತಿಕ ವೇದಿಕೆಯ ಸಹಯೋಗದಲ್ಲಿ ಸನ್ಮಾನಿಸಲಾಯಿತು.

ರೇಖಾ ಸೌದಿಗೆ ಪಟ್ಟದ್ದೇವರ ಸ್ಮರಣೋತ್ಸವದಲ್ಲಿ ಪ್ರಶಸ್ತಿ:

ಬರುವ ಏಪ್ರಿ???ನಲ್ಲಿ ನಡೆಯುವ ಪೂಜ್ಯ ಲಿಂ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ಪ್ರಶಸ್ತಿಯ ಪೈಕಿ ಸಂಗೀತ ಕ್ಷೇತ್ರದ ಸಾಧನೆಗಾಗಿ ಬೀದರ್ ಜಿಲ್ಲೆಯ ಖ್ಯಾತ ಗಾಯಕಿ ರೇಖಾ ಸೌದಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರು ಈ ಸಂದರ್ಭದಲ್ಲಿ ಘೋಷಿಸಿದರು.