ಹೊರಟ್ಟಿ ಸಭಾಪತಿ ಉಪಸಭಾಪತಿಗೆ ಬಿಜೆಪಿ ಹುಡುಕಾಟ

ಬೆಂಗಳೂರು,ಜ.೨೭- ವಿಧಾನ ಪರಿಷತ್ತಿನ ಸಭಾಪತಿ ಕೆ. ಪ್ರತಾಪಚಂದ್ರಶೆಟ್ಟಿ ತಮ್ಮ ಸ್ಥಾನಕ್ಕೆ ಒಂದೆರಡು ದಿನಗಳಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ವಿಧಾನ ಪರಿಷತ್‌ನ ಸಭಾಪತಿ ವಿರುದ್ಧ ಬಿಜೆಪಿ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿ ಬಿಜೆಪಿ ಜತೆ ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ಸದನದಲ್ಲಿ ನಿರ್ಣಯ ಮಂಡನೆಗೂ ಮೊದಲೇ ಸಭಾಪತಿ ಕೆ. ಪ್ರತಾಪಚಂದ್ರಶೆಟ್ಟಿ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಿವೆ.
ನಾಳೆಯಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಸಭಾಪತಿ ಕೆ. ಪ್ರತಾಪ್‌ಚಂದ್ರಶೆಟ್ಟಿ ಅವರನ್ನು ಕೆಳಗಿಳಿಸಿ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೂ ಉಪಸಭಾಪತಿ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಪ್ಪಂದಕ್ಕೆ ಬಂದಿವೆ.
ಈ ಒಪ್ಪಂದ ಕಾರ್ಯರೂಪಕ್ಕೆ ಬಂದರೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ನೂತನ ಸಭಾಪತಿಗಳಾಗುವುದು ಬಹುತೇಕ ಖಚಿತ. ಹಾಗೆಯೇ ಬಿಜೆಪಿಯಿಂದ ಉಪ ಸಭಾಪತಿ ಯಾರಾಗಲಿದ್ದಾರೆ ಎಂಬುದು ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುವ ಬಿಜೆಪಿ ಪರಿಷತ್ ಸದಸ್ಯರು ಹಾಗೂ ಹಿರಿಯ ಮುಖಂಡರ ಸಭೆಯಲ್ಲಿ ತೀರ್ಮಾನವಾಗಲಿದೆ.
ಕಳೆದ ವಿಧಾನ ಮಂಡಲದ ಅಧಿವೇಶನದಲ್ಲೇ ಜೆಡಿಎಸ್ ಜತೆ ಸೇರಿ ಸಭಾಪತಿ ಕೆ. ಪ್ರತಾಪ್‌ಚಂದ್ರಶೆಟ್ಟಿ ವಿರುದ್ಧ ಅವಿಶ್ವಾಸ ಮಂಡಿಸಲು ಬಿಜೆಪಿ ನಡೆಸಿದ ಪ್ರಯತ್ನ ಸಫಲವಾಗದೆ ಪರಿಷತ್‌ನಲ್ಲಿ ಹಿಂದೆಂದು ನಡೆಯದ ಅಹಿತಕರ ಘಟನೆಗಳು ನಡೆದಿದ್ದವು.
ಶತಾಯ-ಗತಾಯ ಈ ಬಾರಿ ಸಭಾಪತಿ ವಿರುದ್ಧ ಅವಿಶ್ವಾಸ ತಂದು ಅವರನ್ನು ಕೆಳಗಿಳಿಸಲು ಆಡಳಿತಾರೂಢ ಬಿಜೆಪಿ ಮತ್ತೆ ಪ್ರಯತ್ನ ಆರಂಭಿಸಿದ್ದು, ಅವಿಶ್ವಾಸ ಸಂಬಂಧ ಪರಿಷತ್‌ನ ಬಿಜೆಪಿ ಸದಸ್ಯರು ನೋಟಿಸನ್ನು ಸಲ್ಲಿಸಿದ್ದಾರೆ.
ಇ ಬಾರಿ ಸಭಾಪತಿಯವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗುವ ವಿಶ್ವಾಸ ಹೊಂದಿರುವ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೂ, ಉಪ ಸಭಾಪತಿ ಸ್ಥಾನವನ್ನು ಬಿಟ್ಟುಕೊಡುವ ಒಪ್ಪಂದ ಎರಡೂ ಪಕ್ಷಗಳಲ್ಲಿ ಆಗಿದೆ.
ಹೊರಟ್ಟಿ ಭೇಟಿ
ವಿಧಾನ ಪರಿಷತ್‌ನ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಲಿರುವ ಹಿರಿಯ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಇಂದು ಬೆಳಿಗ್ಗೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಸಂದೇಶವನ್ನು ತಲುಪಿಸಿದ್ದಾರೆ.
ಇಂದು ಸಭೆ
ವಿಧಾನ ಪರಿಷತ್‌ನ ಉಪ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯರ ಸಭೆ ಕರೆದಿದ್ದು, ಈ ಸಭೆಯಲ್ಲಿ ಕೆಲ ಹಿರಿಯ ಸಚಿವರುಗಳು, ಪಕ್ಷದ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ.
ಈ ಸಭೆಯಲ್ಲಿ ಪರಿಷತ್‌ನ ಉಪ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ. ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯಲ್ಲಿ iಹಂತೇಶ್ ಕವಟಗಿಮಠ, ಅರುಣ್‌ಶಹಾಪುರ, ಸುಶೀಲ್ ನಮೋಶಿ ಇವರುಗಳ ಹೆಸರು ಕೇಳಿ ಬರುತ್ತಿದೆ.
ಉಪ ಸಭಾಪತಿಯಾಗಿದ್ದ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಉಪಸಭಾಪತಿ ಸ್ಥಾನಕ್ಕೆ ನಾಡಿದ್ದು ಶುಕ್ರವಾರ ಚುನಾವಣೆ ನಡೆಯಲಿದೆ.