ಹೊರಜಗತ್ತಿಗೆ ತೆರೆದ ನ್ಯೂಜಿಲೆಂಡ್

ಆಕ್ಲೆಂಡ್, ಆ.೧- ಕೊರೊನಾ ಸೋಂಕಿನಿಂದಾಗಿ ವಿಶ್ವವೇ ಜರ್ಝರಿತವಾಗಿದ್ದು, ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಚೀನಾದಲ್ಲಿ ಈಗಲೂ ಕೂಡ ಕೊರೊನಾದ ಕಠಿಣ ನಿಯಮ ಜಾರಿಯಲ್ಲಿದೆ. ಈ ನಡುವೆ ಜಗತ್ತಿನ ಪ್ರಮುಖ ಪ್ರವಾಸಿ ತಾಣವಾಗಿರುವ ನ್ಯೂಜಿಲೆಂಡ್ ಇದೀಗ ಬರೋಬ್ಬರಿ ೨ ವರ್ಷಗಳ ಬಳಿಕ ಪ್ರವಾಸಿಗರ ಆಗಮನಕ್ಕೆ ತನ್ನನ್ನು ಸಂಪೂರ್ಣವಾಗಿ ತೆರೆದುಕೊಂಡಿದೆ.
ಸೋಮವಾರ ಚೀನಾ ಬಿಸಿನೆಸ್ ಸಮಾವೇಶದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಪ್ರಧಾನಿ ಜೆಸಿಂಡಾ ಆರ್ಡೆನ್, ಅಂತಿಮ ಹಂತದಲ್ಲಿ ಗಡಿಪ್ರದೇಶಗಳನ್ನು ಮುಕ್ತಮಾಡಲಾಗಿರುವುದು ನಮಗೆ ಅಗಾಧವಾದ ಕ್ಷಣವಾಗಿದೆ. ಫೆಬ್ರವರಿಯಿಂದ ಇದು ನಮ್ಮ ಕಡೆಯಿಂದ ಒಂದು ಹಂತದ ಮತ್ತು ಎಚ್ಚರಿಕೆಯ ಪ್ರಕ್ರಿಯೆಯಾಗಿತ್ತು. ನಾವು ಪ್ರಪಂಚದ ಇತರ ಭಾಗಗಳೊಂದಿಗೆ ನಮ್ಮ ಜನರನ್ನು ಸುರಕ್ಷಿತವಾಗಿರಿಸುವ ಹಾಗೂ ಜಾಗತಿಕ ಸಾಂಕ್ರಾಮಿಕವನ್ನು ನಿಗ್ರಹಿಸುವ ನಿಟ್ಟಿನಲ್ಲಿ ನಾವು ಎಚ್ಚರಿಕೆ ನಡೆ ತೆಗೆದುಕೊಂಡಿದ್ದೆವು. ಇದೀಗ ನಾವು ನಮ್ಮನ್ನು ಚೀನಾ ಸೇರಿದಂತೆ ವಿಶ್ವಕ್ಕೆ ತೆರೆದುಕೊಂಡಿದ್ದೇವೆ. ಅತಿಥಿ ಸತ್ಕಾರ ನಮ್ಮ ನರನಾಡಿಯಲ್ಲೂ ಇದೆ. ನಾವು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮಾರ್ಚ್, ೨೦೨೦ರ ಕೊರೊನಾ ಸೋಂಕಿನ ಸಮಯದಲ್ಲಿ ಇತರೆ ರಾಷ್ಟ್ರಗಳಂತೆ ನ್ಯೂಜಿಲೆಂಡ್ ಹೊರಗತ್ತಿನ ನಂಟನ್ನು ಸಂಪೂರ್ಣವಾಗಿ ಕಡಿತಗೊಳಿಸಿತ್ತು. ಯಾವುದೇ ರೀತಿಯ ಆಗಮನ-ನಿರ್ಗಮನಕ್ಕೆ ಅವಕಾಶ ಇರಲಿಲ್ಲ. ಬಳಿಕ ಸೋಂಕು ಇಳಿಯುತ್ತಾ ಬಂದಿದ್ದರೂ ನಿಯಮದಲ್ಲಿ ಕೊಂಚ ಬದಲಾವಣೆ ಮಾಡಿದ್ದರೂ ಸಂಪೂರ್ಣವಾಗಿ ತೆರೆದುಕೊಂಡಿರಲಿಲ್ಲ. ಕಳೆದ ಏಪ್ರಿಲ್‌ನಲ್ಲಿ ಅಂತಿಮ ಹಂತದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇದು ನಿನ್ನೆ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ನ್ಯೂಜಿಲೆಂಡ್ ಇದೀಗ ೨ ವರ್ಷಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂದೆ ನ್ಯೂಜಿಲೆಂಡ್ ಈಗ ತನ್ನ ಬಂದರುಗಳಲ್ಲಿ ಕ್ರೂಸ್ ಹಡಗುಗಳು ಮತ್ತು ವಿದೇಶಿ ಮನರಂಜನಾ ವಿಹಾರ ನೌಕೆಗಳಿಗೆ ನಿಲುಗಡೆ ಸೌಲಭ್ಯ ಕಲ್ಪಿಸಲಿದೆ. ನ್ಯೂಜಿಲೆಂಡ್ ಚೀನಾ ಮೂಲದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಮುಖ ಆದಾಯದ ಮೂಲವಾಗಿದ್ದಾರೆ. ಆದರೆ ಸೋಂಕಿನ ಬಳಿಕ ಈ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪರಿಣಾಮ ನ್ಯೂಜಿಲೆಂಡ್‌ನ ಆರ್ಥಿಕತೆಗೆ ಕೊಡಲಿ ಏಟು ನೀಡಿತ್ತು.