‘ಹೊರಗುತ್ತಿಗೆ ನೌಕರರ ವೇತನ,ಸೌಲಭ್ಯ ಸರಿಯಾಗಿ ಪಾವತಿಸಿ’  


ಉಡುಪಿ, ನ.೫- ಸರಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಸೇರಿದಂತೆ ಎಲ್ಲಾ ನೌಕರರುಗಳ ಕುಂದುಕೊರತೆಗಳನ್ನು ಆಗಿಂದಾಗ್ಗೆ ಬಗೆಹರಿಸಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದ ಅಟಲ್‌ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ನೌಕರರ ರಾಜ್ಯ ವಿಮಾ ನಿಗಮ, ಉದ್ಯೋಗಿಗಳ ಭವಿಷ್ಯ ನಿಧಿ ಇವರ ಸಹಯೋಗದಲ್ಲಿ ನಡೆದ ‘ಹೊರಗುತ್ತಿಗೆ ಸಿಬ್ಬಂದಿಯ ಇಎಸ್‌ಐ ಮತ್ತು ಇಪಿಎಫ್ ಬಗ್ಗೆ ಪ್ರಧಾನ ಮಾಲಕರು ಮತ್ತು ಗುತ್ತಿಗೆದಾರರ ಜವಾಬ್ದಾರಿಗಳು ಮತ್ತು ಕರ್ತವ್ಯ’ಗಳ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು. ಸರಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗ ದವರ ವೇತನ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು  ವಿಳಂಬವಿಲ್ಲದೇ  ಮಾಡಿಕೊಟ್ಟು, ಕಚೇರಿಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾದರೆ ಕಚೇರಿ ದೈನಂದಿನ ಕೆಲಸ ಕಾರ್ಯಗಳು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಸಿಬ್ಬಂದಿಗಳು ಮಾಡಲು ಸಾದ್ಯವಾಗುತ್ತದೆ ಎಂದರು. ಸರಕಾರಿ ಕಚೇರಿ, ನಿಗಮ ಮತ್ತು ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ವೇತನದೊಂದಿಗೆ ಪಾವತಿಸುವ ಇಎಸ್‌ಐ ಮತ್ತು ಇಪಿಎಫ್ ಕಡಿತಗಳ ಬಗ್ಗೆ ಎಲ್ಲಾ ಅಧಿಕಾರಿಗಳು ಮಾಹಿತಿ ಹೊಂದಿರಬೇಕು. ಒಂದೊಮ್ಮೆ ಅವರುಗಳಿಗೆ ಈ ಸೌಲಭ್ಯಗಳು ಲಭಿಸದೇ ಇದ್ದಲ್ಲಿ ಸಂಬಂದಿಸಿದ ಗುತ್ತಿಗೆದಾರರರಿಂದ ಅವುಗಳನ್ನು ದೊರಕಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಬಟವಾಡೆ ಅಧಿಕಾರಿಗಳಿಗೆ, ಅಧೀಕ್ಷಕರು, ಗುಮಾಸ್ತರು ಸೇರಿದಂತೆ ಇಲಾಖಾ ಸಿಬ್ಬಂದಿಯ ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳು ಪಾವತಿಗಳನ್ನು ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಹೊಂದಿದಲ್ಲಿ ಮಾತ್ರ ಯಾವುದೇ ಗೊಂದಲಗಳಿಲ್ಲದೇ ಪಾವತಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಗಾರದಲ್ಲಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್., ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು. ಇಎಸ್‌ಐ ಸೌಲಭ್ಯದ ಕುರಿತು ಮಂಗಳೂರು ಇಎಸ್‌ಐ ಪ್ರಾದೇಶಿಕ ಕಚೇರಿಯ ಸಾಮಾಜಿಕ ಭದ್ರತಾ ಅಧಿಕಾರಿ ಅಭಿಷೇಕ್ ತೋಮರ್, ಇಪಿಎಫ್ ಕುರಿತು ಉಡುಪಿ ಪ್ರಾದೇಶಿಕ ಇಪಿಎಫ್ ಕಚೇರಿಯ ಜಾರಿ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ ಮಾಹಿತಿಗಳನ್ನು ನೀಡಿದರು.