
ಕಲಬುರಗಿ: ನ. 18: ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ಹೊರಗುತ್ತಿಗೆ ನೌಕರರ ಬದಲಾವಣೆ ಮಾಡುವ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿ ಹಾಗೂ ಜೇವರ್ಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದ 24 ವರ್ಷಗಳಿಂದ ಹೊರಗುತ್ತಿಗೆ ಅಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಪರಶುರಾಮ್ ಹಡಲಗಿ ಅವರಿಗೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಿರುವ ಶಿಕ್ಷಕ ರೇವಣಸಿದ್ದಪ್ಪ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ನವೆಂಬರ್ 20ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಸಚಿವಾಲಯದಲ್ಲಿ ಡಾಟಾ ಎಂಟ್ರಿ ಆಪರೇಟರ್ ಮತ್ತು ಗ್ರುಪ್ ಡಿ ನೌಕರರು ಕಚೇರಿ ಕೆಲಸಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದು, ಕಚೇರಿ ಪ್ರಮುಖ ವಿಷಯಗಳ ಕಡಿತ ನಿರ್ವಹಣೆಯಲ್ಲಿ ಗೌಪ್ಯತೆಯನ್ನು ಕಾಪಾಡುತ್ತಿಲ್ಲ ಎಂದು ಮೂರು ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿದ್ದ ಹೊರಗುತ್ತಿಗೆ ನೌಕರರನ್ನು ಅಲ್ಲಿಂದ ವರ್ಗಾವಣೆಗೊಳಿಸಿ ಬೇರೆ, ಬೇರೆ ಇಲಾಖೆಗಳಿಗೆ ತಮ್ಮ ಇಲಾಖೆಗೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿಷಯ ಕೇವಲ ಬೆಂಗಳೂರು ವಿಧಾನಸೌಧಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ಹೊರಗುತ್ತಿಗೆ ನೌಕರರ ಬದಲಾವಣೆ ಕುರಿತು ನೀಡಿದ ಹೇಳಿಕೆಯು ಸಾವಿರಾರು ನೌಕರರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಮೂರು ವರ್ಷಗಳಿಗೂ ಮೇಲ್ಪಟ್ಟು ಕೆಲಸ ಮಾಡುತ್ತಿರುವ ನೌಕರರಿಗೆ ಹಾಸ್ಟೆಲ್ ಕೆಲಸಕ್ಕೆ ಬರಬೇಡಿ, ಬೇರೆ ಹೊಸದಾಗಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತೇವೆ ಎಂದು ನೌಕರರಿಗೆ ಭಯ ಹುಟ್ಟಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಹೊಸದಾಗಿ ನೇಮಕ ಮಾಡಿಕೊಳ್ಳಲು ಲಕ್ಷ ಹಣ ನಿಗದಿಪಡಿಸಿ ವಸೂಲಿಗೆ ಕೈ ಹಾಕುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಜೇವರ್ಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ರೇವಣಸಿದ್ದಪ್ಪ ಎಂಬಾತನು ಕಳೆದ 24 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪರಶುರಾಮ್ ಹಡಲಗಿ ಎಂಬಾತನಿಗೆ ನೀನು ಸಂಘಟನೆ ಜಿಲ್ಲಾಧ್ಯಕ್ಷನೆಂದು ಧಿಮಾಕ್ ಮಾಡಬೇಡ. ಸರ್ಕಾರವು ಆದೇಶ ಹೊರಡಿಸಿದೆ, ನಿನಗೆ ಕೆಲಸದಿಂದ ತೆಗೆದುಹಾಕುತ್ತೇವೆ. ನೀನು ವಾಸಿಸುವ ಕ್ವಾಟರ್ಸ್ ಖಾಲಿ ಮಾಡು ಎಂದು ಬೆದರಿಕೆ ಹಾಕಿದ್ದಾನೆ. ಪ್ರಿನ್ಸಿಪಾಲರೂ ಸಹ ಶಿಕ್ಷಕನಿಗೆ ಕುಮ್ಮಕ್ಕು ಕೊಟ್ಟಿದ್ದಾರೆ. ಆದ್ದರಿಂದ ಶಿಕ್ಷಕನಿಗೆ ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಬಳ್ಳಾರಿ ತಾಲ್ಲೂಕಿನ ಕೊಳ್ಳಗಲ್ ಏಕಲವ್ಯ ವಸತಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 9 ಜನ ನೌಕರರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಸಂಕಿನ್ ದಾಸರ್ ಅವರಿಗೆ ಮನವಿ ಮಾಡಿದರೂ ಸಹ ಸ್ಪಂದಿಸುತ್ತಿಲ್ಲ. ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿ ಹೊಸದಾಗಿ ನೇಮಕ ಮಾಡಿಕೊಂಡಿದ್ದಾರೆ. ಹೊರಗುತ್ತಿಗೆ ನೌಕರರನ್ನು ಬೀದಿ ಪಾಲು ಮಾಡಿದ್ದರಿಂದ ಬಳ್ಳಾರಿ ಚಲೋ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕೆಲವು ಶಾಸಕರು ತಮ್ಮ ಹಿಂಬಾಲಕರಿಗೆ ಹಾಸ್ಟೆಲ್‍ಗಳಲ್ಲಿ ಹೊಸದಾಗಿ ಸೇರಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಹಾಸ್ಟೆಲ್ ನೌಕರರಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದ ಸುಮಾರು 25 ಸಾವಿರ ಜನ ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕೊಟ್ಟು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.