ಹೊರಗುತ್ತಿಗೆ ನೌಕರರಿಗೆ ಸೌಲಭ್ಯಗಳನ್ನು ದೊರಕಿಸಲು ಕರೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.4: ಸರ್ಕಾರದ ವಿವಿಧ ಕಚೇರಿಗಳಲ್ಲಿ ನಿಗಮ ಮಂಡಳಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಪಿಎಫ್.ಇಎಸ್‍ಐ ಸೇರಿದಂತೆ ಕಾನೂನಾತ್ಮಕವಾಗಿ ದೊರಕುವ ಎಲ್ಲ ಸೌಲಭ್ಯಗಳನ್ನು ದೊರಕಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ಉಪ ಕಾರ್ಮಿಕ ಆಯುಕ್ತರಾದ ಡಿ ಜಿ ನಾಗೇಶ ಅವರು ಮಾತನಾಡಿ, ಕಾರ್ಮಿಕರಿಗೆ ನಿಗದಿತ ಕನಿಷ್ಟ ವೇತನ ನೀಡಬೇಕು. ಹೊರಗುತ್ತಿಗೆ ನೌಕರರು ತಮ್ಮ ವಿದ್ಯಾರ್ಹತೆಗೂ ಮೀರಿ ಅನಿವಾರ್ಯತೆಯಿಂದ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಶಾಸನಾತ್ಮಕ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಮಿಕ ಅಧಿಕಾರಿ ಎಸ್.ಜಿ. ಖೈನೂರ, ಕಾರ್ಮಿಕ ಇಲಾಖೆಯಡಿ ವಿವಿಧ ಕಾಯ್ದೆ ಕಾನೂನುಗಳಿವೆ. ನಿಗದಿತ ಸಮಯಕ್ಕಿಂತ ಹೆಚ್ಚಿಗೆ ಹಾಗೂ ಕನಿಷ್ಟ ವೇತನಕ್ಕಿಂತ ಕಡಿಮೆ ವೇತನವನ್ನು ನೀಡುವ ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ಇಟ್ಟುಕೊಂಡ ಸಂಸ್ಥೆಗಳ ಮಾಲೀಕರಿಗೆ ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ತಪಾಸಣೆ ಮಾಡಿ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ದೊರಕಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಇಪಿಎಫ್ ಕುರಿತಾಗಿ ಶಿವಪ್ರಸಾದ ಎಸ್ ಪಿ ಮಾತನಾಡಿದರು.Àು. ಕನಿಷ್ಟ ವೇತನ ಕಾಯ್ದೆ, ಸಮಾನ ವೇತನ ಕಾಯ್ದೆ, ಹೆರಿಗೆ ಭತ್ಯೆ ಕಾಯ್ದೆ, ವೇತನ ಪಾವತಿ ಕಾಯ್ದೆ ಹೀಗೆ ವಿವಿಧ ಕಾರ್ಮಿಕ ಕಾಯ್ದೆಗಳ ಕುರಿತು ಪಿಪಿಟಿ ಮೂಲಕ ಬೆಳಗಾವಿ ಪ್ರಾದೇಶಿಕ ಬೆಳಗಾವಿಯ ಉಪ ಕಾರ್ಮಿಕ ಆಯುಕ್ತರಾದ ಡಿ ಜಿ ನಾಗೇಶ ಉಪನ್ಯಾಸ ನೀಡಿದರು.
ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿಗಳಾದ ಶಂಕರ ಮಾರಿಹಾಳ, ಬೆಳಗಾವಿ ವಿಭಾಗದ ಬೆಳಗಾವಿಯ ಸಹಾಯಕ ಕಾರ್ಮಿಕ ಆಯುಕ್ತರಾದ ಎಂ ಬಿ ಅನ್ಸಾರಿ, ಇಎಸ್‍ಐ ಅಧಿಕಾರಿ ಬರುಣಕುಮಾರ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಗಳಾದ ಎನ್ ಕೆ ಗೋಠೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಜಗದೇವಿ ಸಜ್ಜನ ಸ್ವಾಗತಿಸಿದರು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಡಿಇಒ ಬಾಳಪ್ಪ ಅರ್ಜಿ ವಂದಿಸಿದರು ಹಾಗೂ ನಿರೂಪಿಸಿದರು.