ಹೊರಗುತ್ತಿಗೆ ಕೈಬಿಟ್ಟು ವಸತಿ ನಿಲಯಗಳ ನೌಕರರ ವೇತನ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಗೆ ಆಗ್ರಹ

ಕಲಬುರಗಿ,ಮಾ.27:ಹೊರಗುತ್ತಿಗೆ ಎಂಬ ಜೀತ ಪದ್ದತಿ ಕೈಬಿಟ್ಟು ಮಾಸಿಕ ವೇತನವನ್ನು ಸರ್ಕಾರವೇ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೆಚ್.ಬಿ. ಕೋಸಗಿ ಕಲ್ಯಾಣ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ 2ನೇ ರಾಜ್ಯ ಸಮ್ಮೇಳನದಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಇದೂ ಸಹ ಒಂದಾಗಿದೆ ಎಂದರು.
ನೇರ ನೇಮಕಾತಿ ಪದ್ದತಿಯ ಹೆಸರಿನಲ್ಲಿ ಸಂಬಂಧಪಟ್ಟ ಕೆಲಸದ ಅನುಭವ ಇಲ್ಲದ ಸಿಬ್ಬಂದಿಗಳನ್ನು ನೇಮಿಸದಿರುವಂತೆ ಒತ್ತಾಯಿಸಿದ ಅವರು, ಈಗಾಗಲೇ ಕೆಲಸದಿಂದ ಕೈ ಬಿಡಲಾದ ಎಲ್ಲ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮರಳಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಹಾಗೆ ನೇಮಿಸಿಕೊಳ್ಳುವಾಗ ಸ್ವಜನಪಕ್ಷಪಾತ, ಲಂಚ ಪಡೆಯುವ ಅಕ್ಮರಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಹೊರ ಸಂಪನ್ಮೂಲಕ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನ, ಲಾಕ್‍ಡೌನ್ ಪರಿಹಾರ ಹಾಗೂ ತುಟ್ಟಿಭತ್ಯೆ ಅರಿಯರ್ಸ್ ಬಾಕಿ ಇರುವವರಿಗೆ ಕೂಡಲೇ ತಾರತಮ್ಯವಿಲ್ಲದೇ ಪಾವತಿ ಮಾಡಬೇಕು. ಎಲ್ಲ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂಗೊಳಿಸಬೇಕು. ಅಲ್ಲದೇ ಅವರ ನಿವೃತ್ತಿ ವಯಸ್ಸಿನವರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಹೊಸದಾಗಿ ಆರಂಭಿಸಲಾದ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಹಿಂದೆ ಕೆಲಸ ಮಾಡಿ ಅನುಭವ ಇರುವವರಿಗೆ ಮಾತ್ರ ಮರಳಿ ಕೆಲಸ ನೀಡಬೇಕು. ಶೈಕ್ಷಣಿಕ ಅರ್ಹತೆಯ ಶರತ್ತು ವಿಧಿಸಬಾರದು. ಕ್ರೈಸ್ ಸಂಸ್ಥೆ ಕಳೆದ ಐದಾರು ವರ್ಷಗಳಲ್ಲಿ ಆರಂಭಿಸಿರುವ ಹೊಸ ವಸತಿ ಶಾಲಾ, ಕಾಲೇಜುಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕಡಿತ ಮಾಡಬಾರದು. ಡಿ ವರ್ಗದ ಸಿಬ್ಬಂದಿಗಳು ನೂರು ವಿದ್ಯಾರ್ಥಿಗಳಿಗೆ ಕನಿಷ್ಠ ಎಂಟು ಜನ ಇರಬೇಕು ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಳಿಗೆ ಕಾವಲುಗಾರರಾಗಿ ಹಿಂದಿನ ಅನುಭವ ಇದ್ದವರನ್ನೇ ನೇಮಿಸಬೇಕು. ಜೋಳದ ರೊಟ್ಟಿ ಬಳಕೆಯಾಗುತ್ತಿರುವ ಹಾಸ್ಟೆಲ್‍ಗಳಲ್ಲಿ ರೊಟ್ಟಿ ತಯಾರಿಸುವ ಅನುಭವ ಇರುವ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೇಮಿಸಬೇಕು. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇಕಡಾ 25ರಷ್ಟು ಅಡಿಗೆ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೇಮಿಸಬೇಕು. ಎಲ್ಲ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಾನೂನು ಪ್ರಕಾರ ತಪ್ಪದೇ ವಾರದ ರಜೆ, ಹಬ್ಬಗಳ ರಜೆ ವಿಸ್ತರಿಸಬೇಕು. ಸಂಸದರು,ಶಾಸಕರು ಹೊರಗುತ್ತಿಗೆ ನೌಕರರಾಗಿ ಕೆಲಸಕ್ಕೆ ತೆಗೆದುಕೊಳ್ಳಲು ಕೊಡುವ ಶಿಫಾರಸ್ಸುಗಳನ್ನು ಪರಿಗಣಿಸಬಾರದು. ಇದರಿಂದ ಹಾಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಆದ್ದರಿಂದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲು ತುರ್ತಾಗಿ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಜಂಟಿ ಸಭೆಯನ್ನು ಕರೆಯಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಮ್ಮ ಕೋಡ್ಲಿ, ಮೇಘರಾಜ್ ಕಠಾರೆ, ಸುರೇಶ್ ದೊಡ್ಡಮನಿ, ಪರಶುರಾಮ್ ಜೇವರ್ಗಿ, ಕಾಶಿನಾಥ್ ಬಂಡಿ, ರವಿ ಸಿರಸಗಿ, ಕವಿತಾ ಮಂಜಲ್ಕರ್ ಮುಂತಾದವರು ಉಪಸ್ಥಿತರಿದ್ದರು.