ಹೊನ್ನ ಕಿರಣಗಿಯಲ್ಲಿ ಕುಮಾರಸ್ವಾಮಿಯವರಿಗೆ ಮನವಿ

ಫರತಾಬಾದ:ಜ.14: ಸಮೀಪದ ಹೊನ್ನ ಕಿರಣಗಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆಯು ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ವತಿಯಿಂದ ತರ್ಮಲ್, ಜುವಾರಿ, ಶ್ರೀ ಸಿಮೆಂಟ್ ಕಂಪನಿಗಳು ನೌಕರಿ ನೀಡುತ್ತೇವೆಂದು ಜಮೀನು ಖರೀದಿಸಿ ಸುಳ್ಳು ಭರವಸೆ ನೀಡಿ ಮೋಸ ಮಾಡಿವೆ. ನೀವು ನಮಗೆ ನ್ಯಾಯ ಕೊಡಿಸಿ ಎಂದು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ.ಕೃಷ್ಣಾಬಾಯಿ ಶರಣಪ್ಪ ತತ್ತಿ ಇವರಿಂದ ಮನವಿ ಪತ್ರ ಸಲ್ಲಿಸಲಾಯಿತು.
ಸದರಿ ಜಮೀನು 2009-2012ರಲ್ಲಿ ತರ್ಮಲ್, ಜುವಾರಿ, ಶ್ರೀ ಸಿಮೆಂಟ್ ಕಂಪನಿಗಳು ಖರೀದಿ ಮಾಡುವ ಸಂದರ್ಭದಲ್ಲಿ ಆಯಾ ಜಮೀನು ಮಾಲೀಕರಿಗೆ ಕಂಪನಿಯಲ್ಲಿ ಒಂದು ಕೆಲಸ ನೀಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ನಮ್ಮ ಗ್ರಾಮದವರಿಗೆ ಯಾವುದೇ ನೌಕರಿ ನೀಡಿಲ್ಲವೆಂದು ತಿಳಿಸಿದರು.
1968-72ರ ಅವಧಿಯಲ್ಲಿ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿ 100ಕ್ಕೂ ಹೆಚ್ಚು ತಾಲೂಕುಗಳ ಸ್ಥಿತಿ ಗಂಭೀರವಾಗಿತ್ತು. ಅಂದಿನ ಮುಖ್ಯಮಂತ್ರಿಗಳಾದ ವಿರೇಂದ್ರ ಪಾಟೀಲರವರು ನಮ್ಮ ಗ್ರಾಮಕ್ಕೆ ಭೇಟಿಕೊಟ್ಟಾಗ 101 ತೊಲಾ ಬಂಗಾರವನ್ನು ದಾನದ ರೂಪದಲ್ಲಿ ಸಂಗ್ರಹಿಸಿ ಕೊಟ್ಟಿರುತ್ತಾರೆ. ಆಗ ನಮ್ಮ ಊರಿನ ಹೆಸರು ಕಿರಣಗಿ ಎಂದು ಇತ್ತು. ಅವರು ನಮ್ಮ ಊರಿನ ಮಣ್ಣನ್ನು ನೋಡಿ ಹೊನ್ನ ಕಿರಣಗಿ ಎಂದು ನಾಮಕರಣ ಮಾಡಿದರು. ಅಂತಹ ಹೊನ್ನಿನ ಗ್ರಾಮಕ್ಕೆ ಕಂಪನಿಯವರು ಮೋಸ ಮಾಡಿದ್ದಾರೆ.ಈ ತರ್ಮಲ್, ಜುವಾರಿ, ಶ್ರೀ ಸಿಮೆಂಟ್ ಕಂಪನಿಗಳು ಜಮೀನನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ.
ಸದ್ಯ ನಮ್ಮ ಗ್ರಾಮದಲ್ಲಿ ನಿರುದ್ಯೋಗಿಗಳ ಸಂಖ್ಯೆ ತುಂಬಾ ಇರುವುದರಿಂದ, ನಮ್ಮ ಗ್ರಾಮದವರು ಜಮೀನು ಮಾರಾಟವಾದ ಮೇಲೆ ನೌಕರಿಗಾಗಿ ಕಾದು ಬೇರೆ ಊರುಗಳಿಗೆ ತಮ್ಮ ಉಪಜೀವನಕ್ಕಾಗಿ ಸಾವಿರಾರು ಜನರು ಮುಂಬೈ, ಬೆಂಗಳೂರು, ಹೈದ್ರಾಬಾದ್, ಪೂನಾ ಇತ್ಯಾದಿ ನಗರಗಳಿಗೆ ವಲಸೆ ಹೋಗಿದ್ದಾರೆ. ಇದರಲ್ಲಿ ವಿದ್ಯಾವಂತ ಹುಡುಗರು ಹೆಚ್ಚಿದ್ದಾರೆ. ದಯಮಾಡಿ ತಾವು ಆದಷ್ಟು ಬೇಗ ಕಂಪನಿಯಲ್ಲಿ ನಮ್ಮ ಗ್ರಾಮಸ್ಥರಿಗೆ ನೌಕರಿಯನ್ನು ನೀಡುವುದಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ್, ಜಮೀಲ್ ಗೌಂಡಿ, ಶಂಕರಗೌಡ ಪಾಟೀಲ ಮದರಿ, ಇರಪ್ಪ ತತ್ತಿ ಮುಂತಾದ ಗ್ರಾಮದ ಮುಖಂಡರಿದ್ದರು.