
ಕೋಲಾರ, ಮೇ,೭:ಯುಗಾದಿಯ ನಂತರ ಮಳೆ ಬಿದ್ದಮೇಲೆ ಶಾಸ್ತ್ರೋಕ್ತವಾಗಿ ‘ಹೊನ್ನೇಗಿಲು’ ಪೂಜೆ ನಡೆಸಿದ ನಂತರವೇ ಈ ವರ್ಷದ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಸಂಪ್ರದಾಯ ನೂರಾರು ವರ್ಷಗಳಿಂದ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆಸಿಕೊಂಡು ಬರಲಾಗಿದ್ದು, ಈ ಸಂಬಂಧ ಇಂದು ಎತ್ತುಗಳನ್ನು ಕಟ್ಟದ ನೇಗಿಲಿಗೆ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸಲಾಯಿತು.
ಹೊನ್ನೇಗಿಲು ಎಂದು ಕರೆಯಲ್ಪಡುವ ಈ ಸಂಪ್ರದಾಯ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದ್ದು, ಯುಗಾದಿಯಂದು ಪಂಚಾಂಗ ಪಠಣ ನಡೆಸಿದ ಸಂದರ್ಭದಲ್ಲಿ ಈ ಸಾಲಿನಲ್ಲಿ ಹೊನ್ನೇಗಿಲು ಕಟ್ಟುವ ನಾಮಬಲದ ವ್ಯಕ್ತಿಯ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಹೆಸರಿನ ಮೊದಲ ಅಕ್ಷರ ‘ಮ’ ಇಂದ ಬಂದಿದ್ದು, ಅದರಂತೆ ಗ್ರಾಮದ ಮುನಿಯಪ್ಪ ಅವರನ್ನು ಈ ವರ್ಷದ ಹೊನ್ನೇಗಿಲು ಕಟ್ಟಲು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ನರಸಾಪುರ ಗ್ರಾಮದ ಪುರೋಹಿತರಾದ ಸುಬ್ರಹ್ಮಣ್ಯ ಶಾಸ್ತ್ರಿಯವರ ಸೂಚನೆಯಂತೆ ಜೋಡೆತ್ತು ಕಟ್ಟಿದ ಹೊನ್ನೇಗಿಲಿಗೆ ಗ್ರಾಮದ ಪಟಾಲಮ್ಮ ದೇವಾಲಯದ ಆವರಣದಲ್ಲಿ ಗ್ರಾಮದ ರಾಮಾಧೀಕ್ಷಿತ್ ಪೂಜೆ ಸಲ್ಲಿಸಿದರು.
ಜೋಡೆತ್ತುಗಳು ಮತ್ತು ನೇಗಿಲಿಗೆ ಪೂಜೆ ಸಲ್ಲಿಸಿ, ಈ ವರ್ಷದಲ್ಲಿ ಉತ್ತಮ ಮಳೆ,ಬೆಳೆಯಾಗಲಿ ಎಂದು ಪ್ರಾರ್ಥಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ದೇವರ ಅನುಗ್ರಹ ಪಡೆಯುವ ಈ ಪ್ರಯತ್ನ ಮುನ್ನಡೆಸಿಕೊಂಡು ಹೋಗುತ್ತಿರುವುದಾಗಿ ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡೇಗೌಡ ತಿಳಿಸಿದರು. ತಾಲ್ಲೂಕಿನ ಅರಾಭಿಕೊತ್ತನೂರು ತಾಲ್ಲೂಕಿನಲ್ಲೇ ಅತಿ ಹೆಚ್ಚು ದೇವಾಲಯ ಗಳನ್ನು ಹೊಂದಿರುವ ಗ್ರಾಮವೆಂದು ಮತ್ತು ದೇವಾಲಯಗಳ ಊರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ ಇಲ್ಲಿ ಅನೇಕ ವೀರಗಲ್ಲುಗಳು ಸಿಕ್ಕಿದ್ದು, ಈ ಗ್ರಾಮದಲ್ಲಿ ಸಿಕ್ಕಿರುವ ಇತಿಹಾಸವನ್ನು ನೆನಪಿಸುವ ವೀರಗಲ್ಲುಗಳನ್ನು ಗ್ರಾಮದಲ್ಲಿ ಇತ್ತೀಚೆಗೆ ಜೀರ್ಣೋದ್ದಾರಗೊಂಡ ಕಲ್ಯಾಣಿಯ ಸಮೀಪ ಸುಂದರವಾದ ಪಾರ್ಕ್ ನಿರ್ಮಿಸಿ ಸಂರಕ್ಷಿಸಲಾಗಿದೆ.
ಹೊನ್ನೇಗಿಲು ಪೂಜಾ ಕಾರ್ಯದಲ್ಲಿ ಗ್ರಾಮದ ಮುಖಂಡರಾದ ಜಯರಾಮೇ ಗೌಡ, ರಾಮೇಗೌಡ, ಎ.ಎಸ್.ರವಿಕುಮಾರ್,ಆಂಜಿನಪ್ಪ, ಕೃಷ್ಣಮೂರ್ತಿ, ಎ.ಸೋಮಶೇಖರಗೌಡ, ಕಿಟ್ಟಪ್ಪ, ವೆಂಕಟೇಶಪ್ಪ ಮತ್ತು ಗ್ರಾಮಸ್ಥರು ಹಾಜರಿದ್ದರು.