ಹೊನ್ನಾಳಿ ಸುತ್ತಮುತ್ತ ಮುಷ್ಯಗಳ ಹಾವಳಿ;ಬೇಸತ್ತ ಜನರು


ಹೊನ್ನಾಳಿ.ಅ.೨೦; ತಾಲೂಕಿನ ಕೂಲಂಬಿ ಸಮೀಪದ ಯರೇಚಿಕ್ಕನಹಳ್ಳಿ, ಸಾಸ್ವೆಹಳ್ಳಿ ಬಳಿಯ ಭೈರನಹಳ್ಳಿ ಬಳಿಕ ಇದೀಗ ಹೊನ್ನಾಳಿ ಪಟ್ಟಣದ ಹೃದಯ ಭಾಗದ ಜನವಸತಿ ಪ್ರದೇಶಗಳಲ್ಲಿ ಮುಷ್ಯಗಳ ಹಾವಳಿ ಪ್ರಾರಂಭವಾಗಿದೆ.
ಮೂರು ಮುಷ್ಯಗಳು ದಾರಿಹೋಕರ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುತ್ತಿವೆ. ಜನರು ಒಂಟಿಯಾಗಿ ಓಡಾಡುವಂತಿಲ್ಲ. ಮನೆಗಳಿಂದ ಹೊರಗೆ ಜನರು ನಿರ್ಭಯವಾಗಿ ಬರುವಂತಿಲ್ಲ. ಮನೆ ಬಿಟ್ಟು ಹೊರಗೆ ಎಲ್ಲಿಯೂ ತೆರಳುವಂತಿಲ್ಲ. ಇಂಥ ಭಯಭೀತ ವಾತಾವರಣ ಸೃಷ್ಟಿಯಾಗಿರುವುದು ಹೊನ್ನಾಳಿ ಪಟ್ಟಣದ ದೊಡ್ಡಪೇಟೆ, ದುರ್ಗಿಗುಡಿ ಉತ್ತರ ಭಾಗದ ಬಡಾವಣೆ, ಕಲ್ಕೇರಿ, ಸಿದ್ಧಪ್ಪನಕೇರಿ, ಸೊಪ್ಪಿನಕೇರಿ ಮತ್ತಿತರ ಪ್ರದೇಶಗಳಲ್ಲಿ.
ಪಟ್ಟಣದಲ್ಲಿ ಸುಮಾರು ಎಪ್ಪತ್ತಕ್ಕಿಂತ ಅಧಿಕ ಮುಷ್ಯಗಳಿವೆ. ಇಲ್ಲಿಯವರೆಗೆ ಯಾವ ಮುಷ್ಯ ಕೂಡ ಜನರಿಗೆ ತೊಂದರೆ ನೀಡಿದ ಉದಾಹರಣೆಗಳಿಲ್ಲ. ಪಟ್ಟಣದ ಎಪಿಎಂಸಿ ಆವರಣ, ಮಾರಿಕೊಪ್ಪ ರಸ್ತೆ, ಹಿರೇಕಲ್ಮಠ ಪ್ರದೇಶ, ಕೋಟೆ, ಕುಂಬಾರ ಬೀದಿ, ಟಿ.ಬಿ. ವೃತ್ತ, ಸುಂಕದಕಟ್ಟೆ ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಮುಷ್ಯಗಳು ಕಂಡುಬರುತ್ತವೆಯಾದರೂ ಜನರಿಗೆ ತೊಂದರೆ ನೀಡುತ್ತಿದ್ದಿಲ್ಲ. ಆದರೆ, ಮೂರು ಮುಷ್ಯಗಳು ಮಾತ್ರ ವಾರದಿಂದೀಚೆಗೆ ಈ ರೀತಿ ವಿಲಕ್ಷಣ ವರ್ತನೆ ತೋರುತ್ತಿವೆ. ಜನರಿಗೆ ತೀವ್ರ ತೊಂದರೆ ಆಗುತ್ತಿದ್ದು, ಬೇಸತ್ತುಹೋಗಿದ್ದಾರೆ.
ವಿಶೇಷವಾಗಿ ರಸ್ತೆ ಮೇಲೆ ತೆರಳುವ ಬೈಕ್‌ಗಳನ್ನು ಕಂಡರೆ ಮುಷ್ಯ ಅಟ್ಟಿಸಿಕೊಂಡು ಹೋಗುತ್ತದೆ. ಮನೆಗಳ ಛಾವಣಿ ಮೇಲಿನಿಂದ ಸೀದಾ ಬೈಕ್ ಮೇಲೆ ಹಾರಿ ಬರುವ ಮುಷ್ಯ ಬೈಕ್ ಹಾಗೂ ಸವಾರರನ್ನೂ ಕೆಳಗೆ ಬೀಳಿಸುತ್ತದೆ. ಕಚ್ಚಿ ಗಾಯಗೊಳಿಸುತ್ತದೆ. ಜನರನ್ನು ಕಂಡ ಕೂಡಲೇ ಹಲ್ಲುಗಳನ್ನು ಮಸೆಯುತ್ತಾ ದಾಳಿಗೆ ಮುಂದಾಗುತ್ತದೆ. ಕ್ರುದ್ಧಗೊಂಡ ವೇಳೆ ಹಿಂಬದಿಯ ಎರಡು ಕಾಲುಗಳ ಮೇಲೆ ನಿಂತುಕೊಳ್ಳುತ್ತದೆ. ಈ ಮುಷ್ಯ ಮನುಷ್ಯನ ಹಾಗೆ ಕಪಾಳಕ್ಕೆ ಹೊಡೆಯುವುದನ್ನು ರೂಢಿಸಿಕೊಂಡಿದೆ. ಮನೆಗಳಿಂದ ಹೊರಬರಬೇಕಾದರೆ ಜನರು ಗುಂಪು-ಗುಂಪಾಗಿ, ಕೈಗಳಲ್ಲಿ ಕೋಲುಗಳನ್ನು ಹಿಡಿದುಕೊಂಡು ಬರಬೇಕು. ಅಂಥ ಸ್ಥಿತಿ ಉದ್ಭವಿಸಿದೆ. ಬಹುಶಃ ಈ ಮುಷ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು ಎಂದು ಸಾರ್ವಜನಿಕರು ಶಂಕಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ಮುಷ್ಯಗೆ ಬೈಕ್ ಡಿಕ್ಕಿಯಾಗಿತ್ತು. ಆ ಸಂದರ್ಭದಲ್ಲಿ ತಲೆಯ ಭಾಗಕ್ಕೆ ಪೆಟ್ಟು ಬಿದ್ದ ಪರಿಣಾಮ ಈ ರೀತಿಯಾಗಿ ವರ್ತಿಸುತ್ತಿದೆ ಎನ್ನಲಾಗುತ್ತಿದೆ.ಬಾಲಕರು, ವಯಸ್ಕರು, ಮಹಿಳೆಯರು ಹೀಗೆ ಯಾರನ್ನೂ ನೆಮ್ಮದಿಯಿಂದ ಓಡಾಡಲು ಬಿಡುವುದಿಲ್ಲ. ದೊಡ್ಡಪೇಟೆಯ ಕೆ. ಚನ್ನೇಶ್ ಎಂಬ ಯುವಕನ ಕಾಲು, ಕೈಗೆ ರಕ್ತ ಬರುವ ಹಾಗೆ ಕಚ್ಚಿ ಗಾಯಗೊಳಿಸಿದೆ. ಆತ ಬ್ಯಾಂಡೇಜ್ ಹಾಕಿಸಿಕೊಂಡಿದ್ದಾನೆ. ಈವರೆಗೆ ಮುಷ್ಯನಿಂದ ಕಚ್ಚಿಸಿಕೊಂಡ ಪಟ್ಟಣದ ಒಟ್ಟು ೨೦ಕ್ಕೂ ಅಧಿಕ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಲ್ಲಿಕಾರ್ಜುನ್, ಅಮಾನುಲ್ಲಾ, ಅತೀಫ್ ಮತ್ತಿತರರು ತೀವ್ರವಾಗಿ ಗಾಯಗೊಂಡಿದ್ದಾರೆ.ಮುಷ್ಯನ ಈ ವರ್ತನೆಯಿಂದ ಬೇಸತ್ತ ಸಾರ್ವಜನಿಕರು ಪಟ್ಟಣ ಪಂಚಾಯ್ತಿಗೆ ದೂರು ನೀಡಿದ್ದಾರೆ.
ಪಪಂ ಅಧ್ಯಕ್ಷ ಕೆ.ವಿ. ಶ್ರೀಧರ್, ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಪೌರನೌಕರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಹಾಗೂ ಬುಧವಾರ ಎರಡೂ ದಿನಗಳ ಕಾಲ ಬಲೆ ಹಿಡಿದುಕೊಂಡು ಮುಷ್ಯ ಸೆರೆಗೆ ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ. ಶೀಘ್ರವೇ ಮುಷ್ಯನನ್ನು ಹಿಡಿಯುತ್ತೇವೆ. ಸಾರ್ವಜನಿಕರು ಹೆದರಬಾರದು ಎನ್ನುತ್ತಾರೆ ಪಪಂ ಅಧ್ಯಕ್ಷ ಕೆ.ವಿ. ಶ್ರೀಧರ್. ನಮಗೆ ಈ ಮುಷ್ಯನಿಂದ ಮುಕ್ತಿ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ ನೊಂದ ಜನರು.