ಹೊನ್ನಟಗಿ ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಿ

ದೇವದುರ್ಗ,ಜೂ.೨೩- ಸಮೀಪದ ಹೇಮನಾಳ ಗ್ರಾಪಂ ವ್ಯಾಪ್ತಿಯ ಹೊನ್ನಟಗಿ ಗ್ರಾಮಕ್ಕೆ ಶುದ್ಧ ಕುಡಿವ ನೀರು ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಗುರುವಾರ ಮನವಿ ಸಲ್ಲಿಸಿದರು.
ಹೊನ್ನಟಗಿ ಗ್ರಾಮ ಮೂರು ವರ್ಷಗಳ ಹಿಂದೆ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು ವಿವಿಧ ಕಾಮಗಾರಿ ಕೈಗೊಳ್ಳಲು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಲ್ಯಾಂಡ್‌ಆರ್ಮಿ) ಸೂಚಿಸಿದೆ. ೨೦೧೯-೨೦ರಲ್ಲಿ ಯೋಜನೆಯಡಿ ಮೂಲಸೌಲಭ್ಯ ಕಲ್ಪಿಸಲು ೪೦ಲಕ್ಷ ರೂ. ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದೆ. ಅಧಿಕಾರಿಗಳು ನಿರ್ಲಕ್ಷ್ಯದಿಂದ ಅನುದಾನ ಬಳಕೆಯಾಗಿಲ್ಲ.
ಕುಡಿವ ನೀರಿಲ್ಲದೆ ಹಳ್ಳದಲ್ಲಿ ತೆರೆದ ವರತೆ ನೀರು ಕುಡಿಯುವಂತಾಗಿದೆ. ಶುದ್ಧ ಕುಡಿವ ನೀರು ಕಲ್ಪಿಸಲು ೧೬ಲಕ್ಷ ರೂ. ಅನುದಾನ ಬಂದಿದ್ದರೂ ಅರೆಬರೆ ಕಾಮಗಾರಿ ಮಾಡಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ಮಾಡದೆ ೬.೬೬ಲಕ್ಷ ರೂ. ಅನುದಾನ ಎತ್ತುವಳಿ ಮಾಡಲಾಗಿದೆ. ಇದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
ಕೂಡಲೇ ಆದರ್ಶ ಗ್ರಾಮದಡಿ ಅನುದಾನ ಬಂದರೂ ಕಾಮಗಾರಿ ಕೈಗೊಳ್ಳದ ಲ್ಯಾಂಡ್‌ಆರ್ಮಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿ ಸೇವೆಯಿಂದ ಅಮಾನತು ಮಾಡಬೇಕು. ತಕ್ಷಣವೇ ಶುದ್ಧಕುಡಿವ ನೀರಿನ ಘಟಕ ಆರಂಭಿಸಬೇಕು. ಅನುದಾನ ದುರ್ಬಳಕೆ ಬಗ್ಗೆ ತನಿಖೆ ನಡೆಸಬೇಕು. ನಿರ್ಲಕ್ಷ್ಯ ಮಾಡಿದರೆ ಗ್ರಾಪಂಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ, ರಾಜಪ್ಪ ಸಿರವಾರಕರ್, ಮಾರ್ತಂಡ ಗಬ್ಬೂರು, ಮಲ್ಲಯ್ಯ ಖಾನಾಪುರ, ಮಾರೆಪ್ಪ ಹೊನ್ನಟಗಿ, ಮುಲುಗಪ್ಪ ಹೊನ್ನಟಗಿ ಇತರರಿದ್ದರು.