ಹೊನ್ಕಲ್ ಗೆ “ಕನ್ನಡ ಸಿರಿ ಪ್ರಶಸ್ತಿ” ಪ್ರದಾನ

ಕಲಬುರಗಿ,ಜ.3-ಆರೋಗ್ಯ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ಹಿರಿಯ ಕವಿ, ಸಾಹಿತಿ ಸಿದ್ದರಾಮ ಹೊನ್ಕಲ್ ಅವರಿಗೆ ಕಲಬುರಗಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ “ಕನ್ನಡ ಸಿರಿ” ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕಸಪಾ ಕಲಬುರಗಿ ತಾಲ್ಲೂಕ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ವೆಂಕಟೇಶ ನೀರಡಗಿ ಅವರು ಹೊನ್ಕಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಹೊನ್ಕಲ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತಿ, ಕವಿಗಳಾಗಿ ನಾಡಿನುದ್ದಕ್ಕೂ ಚಿರಪರಿಚಿತರಾಗಿದ್ದಾರೆ. ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹೊನ್ಕಲ್ ಅವರು, ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದವರು. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಹೊನ್ಕಲ್ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಕನ್ನಡಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದು ಸಿ.ಎಸ್.ಮಾಲಿಪಾಟೀಲ ಹೇಳಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸಕ್ರೆಪ್ಪಗೌಡ ಬಿರಾದಾರ, ಚೆನ್ನಬಸು ಮುಧೋಳ, ಪ್ರಾಂಶುಪಾಲರಾದ ಡಾ.ರಮೇಶ ಜಾಧವ್, ಮಲ್ಲಿಕಾರ್ಜುನ, ಡಾ.ಓಂ ಪ್ರಕಾಶ‌ ಕಟ್ಟಿಮನಿ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.