ಮೈಸೂರು, ಅ.೨೨-ಮೂಡಣದಲಿ ಉದಯಿಸಿದ ಸೂರ್ಯ ತನ್ನ ಡ್ಯೂಟಿ ಮುಗಿಸಿ ಕಳಾಹೀನನಾಗಿ ಪಡುವಣದ ಅಂಚಿನಲಿ ಜಾರುತ್ತಿರುವಂತೆ ನಿಧಾನವಾಗಿ ಹೊತ್ತಿಕೊಳ್ಳುವ ದೀಪಗಳನ್ನ ಕಂಡ ಪಕ್ಷಿಗಳು ಆಹಾರ ಹರಸುವುದನ್ನು ಬಿಟ್ಟು ಗೂಡಿನೆಡಗೆ ನಡೆಯುತ್ತಿವೆ.
ಮನೆಯೊಳಗೆ ಅಮ್ಮಂದಿರಿಗೆ ಕಿರಿಕ್ ಮಾಡುತಿದ್ದ ಪುಟಾಣಿಗಳು ಕಿಟಕಿ ಸಂದಿಯಿಂದ ತೂರಿಬಂದ ಬೆಳಕನು ಕಂಡು ಚಂದಮಾಮ ಬಂದ ಎಂದು ಓಡೋಡಿ ಮನೆಯಂಗಳಕೆ ಧಾವಿಸುತ್ತಾ ಜಗಮಗಿಸುವ ಬೆಳಕಿಗೆ ಕುತೂಹಲಿಗಳಾಗುತ್ತಾರೆ.
ಸತ್ಯ! ಮೈಸೂರು ದಸರಾ ದೀಪಾಲಂಕಾರ ಜಗದ್ವಿಖ್ಯಾತಿ ಹಾಗೆಯೇ ಎಷ್ಟೋ ಮಂದಿ ಬೆಳಕಿನ ವೈಭವವನ್ನು ಕಣ್ತುಂಬಿಕೊಳ್ಳಲು ವರ್ಷಪೂರ್ತಿ ಕಾಯುವುದೂ ಉಂಟು. ಆ ಮಟ್ಟಿಗಿನ ಖದರು ದೀಪಾಲಂಕಾರದ್ದು.
ಚೆಸ್ಕಾಂ ವತಿಯಿಂದ ಹಾಕಲಾಗಿರುವ ಸುಮಾರು ೧೨೪.೧೫ ಕಿಮೀ ದೂರದ ಅಗಾಧ ಎಲ್‌ಇಡಿ ಬಲ್ಬ್ಗಳ ಬೆಳಕಿನ ಸರಮಾಲೆ ನಗರದ ಉದ್ದುದ್ದ ರಸ್ತೆಗಳು ಹಾಗೂ ವಿವಿಧ ವೃತ್ತಗಳನ್ನು ಶೋಭಾಯಮಾನವಾಗಿಸಿವೆ.
ಕಣ್ಣು ಕೋರೈಸುವ ಬೆಳಕಲ್ಲಿ ಚಿಣ್ಣರು ಕುಣಿದು ಕುಪ್ಪಳಿಸುತ್ತಾ ಬೆಳಕಿನ ಸರಮಾಲೆಯನು ಒಮ್ಮೆ ಮುಟ್ಟಿ ನೋಡಲು ತವಕಿಸುತ್ತಿದ್ದಾರೆ.
ಮನೆ ಮುಂದಿನ ಜಗುಲಿಯಲಿ ಕುಳಿತ ವಯೋವೃದ್ದರು ಗತಕಾಲದ ದಸರೆಗೂ ಇಂದಿನ ದಸರೆಗೂ ತಾಳೆಹಾಕುತ್ತಿದ್ದಾರೆ,
ಸರ್ಕಾರ ಕೊಟ್ಟ ಗೃಹಜ್ಯೋತಿ ಬೆಳಕಿಗೆ ದಸರಾ ದೀಪಾಲಂಕಾರವೂ ಸೇರಿ ದಸರಾ ಮತ್ತಷ್ಟು ಕಳೆಗಟ್ಟಿದೆ,ಇದರೊಂದಿಗೆ ಸರ್ಕಾರದ ಗೃಹ ಜ್ಯೋತಿ ಯೋಜನೆಯಿಂದ ನಮ್ಮ ಮನೆಯಂಗಳದಲೂ ಬೆಳಕು ಮೂಡಿತೆಂಬ ಸಂತೃಪ್ತ ಭಾವ ಮನೆಯೊಡತಿಯರದು.
ಮೈಸೂರನ್ನಾಳಿ ಇತಿಹಾಸ ನಿರ್ಮಿಸಿದ ಮುಮ್ಮಡಿ,ನಾಲ್ವಡಿ,ಜಯಚಾಮರಾಜ ಒಡೆಯರು,ಕೃಷ್ಣರಾಜ ಒಡೆಯರು ಅವರ ಸಾಧನೆಗಳು ಹೊಂಬೆಳಕಲಿ ಕಂಗೊಳಿಸುತ್ತಿವೆ.
ಮೈಸೂರು ಅರಮನೆ, ನಗರಪಾಲಿಕೆ, ಪಾರಂಪರಿಕ ಕಟ್ಟಡಗಳು ಕಣ್ಣು ಕೋರೈಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಈ ಅಭೂತಪೂರ್ವ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಇತ್ತೀಚೆಗೆ ಯುನೆಸ್ಕೋ ಪಟ್ಟಿಗೆ ಸೇರಿದ ಸೋಮನಾಥ ದೇವಾಲಯದ ಪ್ರತಿರೂಪ ಎಲ್‌ಐಸಿ ಸರ್ಕಲ್ನಲ್ಲಿ ಝಗಮಗಿಸುತಿದೆ.
ಸರ್ಕಾರದ ಐದು ಗ್ಯಾರಂಟಿಗಳಾದ ಅನ್ನಭಾಗ್ಯ,ಗೃಹಜ್ಯೋತಿ,ಗೃಹಲಕ್ಷ್ಮಿ,ಶಕ್ತಿ ಹಾಗೂ ಯುವನಿಧಿ ಯೋಜನೆಗಳು ಚಿತ್ತಾಕರ್ಷಕವಾಗಿವೆ.
ಬೆಳಕಲ್ಲರಳಿದ ಬಾಹುಬಲಿ ವೈರಾಗ್ಯಮೂರ್ತಿಯಾಗಿ ತದೇಕಚಿತ್ತನಾಗಿ ನಿಂತು ಮಂದಸ್ಮಿತನಾಗಿದ್ದಾನೆ.
ಸಾಹಿತಿಗಳು,ಕ್ರೀಡಾಪಟುಗಳು,ವಿಜ್ನಾನಿಗಳು,ಚಂದ್ರ ಯಾನ,ಮುಂತಾದವುಗಳು ಮುದ್ದಾಗಿ ಮೂಡಿಬರುವುದರೊಂದಿಗೆ ದೀಪಾಲಂಕಾರ ಕಣ್ಣುಗಳಿಗೆ ಕಚಗುಳಿಯಿಡುತ್ತಿದೆ.