ಹೊತ್ತು ಹೋಗುವ ಮುನ್ನ ಸಮಾಜಕ್ಕೆ ಒಳಿತುಮಾಡಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.18: ಹಸಿವಾಗುವ ಮುನ್ನ, ತೃಷೆಯಾಗುವ ಮುನ್ನ ಹಾಗೂ ದೇಹಕ್ಕೆ ವ್ಯಾಧಿ ತೆಗಲುವ ಮುನ್ನ ಜೀವನದಲ್ಲಿ ಒಂದಾದರೂ ಒಳ್ಳೆಯ ಕೆಲಸ ಮಾಡಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಗಳಲ್ಲಿ ಸಿದ್ದರಾಮೇಶ್ವರರು ಪ್ರಥಮ ದರ್ಜೆ ವಚನಕಾರರಾಗಿದ್ದು,ಕಾಯಕ ಹಾಗೂ ಸ್ವಯಂಸೇವಾ ಗುಣವನ್ನು ಮೈಗೂಡಿಸಿಕೊಂಡು ಆದರ್ಶ ಪ್ರಾಯರಾಗಿದ್ದರು ಎಂದರು.
ಶಿವಶರಣರು ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡಿದ್ದರು.ದೇವಾಲಯ ಕಟ್ಟವುದಾದರೆ ಅದು ಶ್ರೀ ಸಾಮಾನ್ಯರ ಉದ್ಧಾರಕ್ಕಾಗಿ ಇರಬೇಕು ಎಂದು ನಂಬಿದ್ದರು ಎಂದು ಹೇಳಿದರು.
ಶಾಲೆಯ ವಿಜ್ಞಾನ ಶಿಕ್ಷಕರಾದ ಮುನಾವರ ಸುಲ್ತಾನ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿವಶರಣರ ಆದರ್ಶ ಮೈಗೂಡಿಸಿಕೊಂಡು ಬಾಳಬೇಕೆಂದು ಹೇಳಿದರು.
ಶಿಕ್ಷಕರಾದ ಸುಮತಿ ಶರಣರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ,ಚನ್ನಮ್ಮ ಪೂಜೆ ನೆರವೇರಿಸಿದರು. ಶಿಕ್ಷಕರಾದ ದಿಲ್ಷಾದ್ ಬೇಗಂ,ಉಮ್ಮೆಹಾನಿ,ನಿಂಗಮ್ಮ,ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು.