ಹೊಟ್ಟೆನೋವಿಗೆ ಮನೆಮದ್ದು

ಹೊಟ್ಟೆನೋವು ನಾನಾ ಕಾರಣಗಳಿಗಾಗಿ ಬರುತ್ತದೆ. ಅಜೀರ್ಣದಿಂದ ಅಥವಾ ವಾತದೋಷದಿಂದ, ಆಹಾರದ ವ್ಯತ್ಯಾಸದಿಂದ, ನೀರು ಬದಲಾವಣೆಯಿಂದ, ಈ ರೀತಿ ಅನೇಕ ಕಾರಣಗಳು ಇರುತ್ತವೆ. ಅದಕ್ಕೆ ತಕ್ಕಹಾಗೆ ಚಿಕಿತ್ಸೆ ಮಾಡಬೇಕಾಗುತ್ತದೆ.
೧. ಹೊಟ್ಟೆನೋವು, ಹೊಟ್ಟೆಉಬ್ಬರ, ಹೊಟ್ಟೆಯಲ್ಲಿ ಹಸಿವಾಗದಿರುವಿಕೆ, ನಿಂಬೆಹಣ್ಣಿನ ರಸದಲ್ಲಿ ಜೀರಿಗೆ ಹಾಗೂ ಓಂಕಾಳು ಪುಡಿಯನ್ನು ನೆನೆಇಟ್ಟು ಅದನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿಟ್ಟುಕೊಂಡು ೨ ಚಿಟಿಕೆಯಷ್ಟು ಬಾಯಿಗೆ ಹಾಕಿಕೊಂಡು ಬಿಸಿನೀರು ಕುಡಿದರೆ ಅನುಕೂಲವಾಗುತ್ತದೆ.
೨. ಕರುಳಿನಲ್ಲಿರುವ ಹಾನಿಕಾರಕ ಜೀವಿಗಳು, ೧ ಪರಂಗಿ ಎಲೆ ತಿನ್ನುವುದರಿಂದ ನಾಶವಾಗುತ್ತವೆ.
೩. ಎಕ್ಕದ ಎಲೆಯ ಕಷಾಯ ಮಾಡಿ ಸೇವಿಸುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ.
೪. ಎಲ್ಲಾ ರೀತಿಯ ಹೊಟ್ಟೆನೋವಿಗೆ: ಜೀರಿಗೆ, ಕಾಳುಮೆಣಸು, ಹಿಪ್ಪಲಿ, ಸೈಂಧವ ಲವಣ, ಅಜವಾನ ಎಲ್ಲವನ್ನೂ ಸಮಪಾಲು ತೆಗೆದುಕೊಂಡು ಪುಡಿಮಾಡಿಟ್ಟುಕೊಂಡು ೨ ಚಿಟಿಕೆ ಪುಡಿಯನ್ನು ಬಾಯಿಗೆ ಹಾಕಿಕೊಂಡು ಬಿಸಿನೀರು ಕುಡಿದರೆ ಹೊಟ್ಟೆನೋವು ಕಡಿಮೆ ಆಗುತ್ತದೆ.
೫. ಮಾದವಾಳದ ಹಣ್ಣಿನ ರಸದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.
೬. ಇಂಗನ್ನು ತುಪ್ಪದಲ್ಲಿ ಕರಿದು ಆ ಇಂಗಿನ ತುಂಡನ್ನು ನುಂಗಿ ಬಿಸಿನೀರನ್ನು ಕುಡಿಯುವುದರಿಂದ ಹೊಟ್ಟೆನೋವು ಹತೋಟಿಗೆ ಬರುತ್ತದೆ.
೭. ಊಟದ ನಂತರ ರಾತ್ರಿ ವೇಳೆ ಬಿಸಿಹಾಲಿಗೆ ಬೆಲ್ಲ, ಸ್ವಲ್ಪ ತುಪ್ಪ ಹಾಕಿ ಕುಡಿದರೆ ಆಗಾಗ್ಗೆ ಬರುವ ಹೊಟ್ಟೆನೋವು ಕಡಿಮೆ ಆಗುತ್ತದೆ. (೮ ದಿನಗಳ ಕಾಲ).
೮. ಕೊತ್ತಂಬರಿ ಬೀಜ ಪುಡಿಮಾಡಿಕೊಂಡು ೧ ಚಮಚ ಬೀಜಕ್ಕೆ ಅರ್ಧ ಚಮಚ ಒಣಶುಂಠಿ ಪುಡಿಯನ್ನು ಹಾಕಿ ಕಷಾಯ ಮಾಡಿ ಸೇವಿಸಿದರೆ ಹೊಟ್ಟೆನೋವು ಕಡಿಮೆ ಆಗುತ್ತದೆ.
೯. ವಿಷ ಪದಾರ್ಥ ಹೊಟ್ಟೆಗೆ ಸೇರಿದರೆ ಬೂದುಗುಂಬಳಕಾಯಿಯ ರಸವನ್ನು ಹೊಟ್ಟೆ ತುಂಬಾ ಕುಡಿದರೆ ವಾಂತಿಯ ಮುಖಾಂತರ ವಿಷ ಪದಾರ್ಥ ಹೊರಕ್ಕೆ ಬರುವುದು.
೧೦. ಹೊಟ್ಟೆ ಉಬ್ಬರ ಅಥವಾ ಅಜೀರ್ಣ: ಸೀಬೆಹಣ್ಣಿನ ಗಿಡದ ಚಿಗುರೆಲೆ, ೧ ತುಂಡು ಹಸಿಶುಂಠಿ, ಸೈಂಧವ ಲವಣದ ಜೊತೆ ಸೇರಿಸಿ ಅಗಿದು ತಿಂದರೆ, ಎಂತಹ ಹೊಟ್ಟೆನೋವು ಇದ್ದರೂ ಕಡಿಮೆ ಆಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.