ಹೊಟೇಲ್ ತಿಂಡಿ, ಆಟೋ ದರ ಹೆಚ್ಚಳ ಜನ ತತ್ತರ

ಬೆಂಗಳೂರು, ನ. ೮- ಅಗತ್ಯ ವಸ್ತುಗಳಿಗೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಹೋಟೆಲ್‌ಗಳು ತಿಂಡಿ-ತಿನಿಸುಗಳ ಬೆಲೆ ಏರಿಕೆ ಜೊತೆಗೆ ಆಟೋದರ ಹೆಚ್ಚಳದಿಂದ ಬಸವಳಿಯುವಂತಾಗಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಂಡರ್‌ಗಳ ಬೆಲೆ ನಿರಂತರ ಏರಿಕೆಯಿಂದ ಬೆಂಗಳೂರು ಹೋಟೆಲ್ ಮಾಲೀಕರು ಸೇರಿದಂತೆ ರಾಜ್ಯದ ಹೋಟೆಲ್‌ಗಳ ಮಾಲೀಕರು ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿ ಇಂದಿನಿಂದಲೇ ಜಾರಿಗೊಳಿಸಿದ್ದಾರೆ.
ಅಂತೆಯೇ ಬಹುದಿನಗಳಿಂದ ಆಟೋ ಪ್ರಯಾಣ ದರವನ್ನು ಸರ್ಕಾರ ಹೆಚ್ಚು ಮಾಡಿ ಜಾರಿ ಗೊಳಿಸಿದೆ. ಗ್ರಾಹಕರು ಹೋಟೆಲ್‌ಗಳಲ್ಲಿ ತಮಗೆ ಇಷ್ಟವಾದ ತಿಂಡಿ-ತಿನಿಸು ತಿನ್ನಲು ಹೆಚ್ಚಿನ ಬೆಲೆ ತೆರಬೇಕಾಗಿದೆ.
ಆಟೋಗಳ ಕನಿಷ್ಠ ದರವನ್ನು ೨೫ ರೂ. ನಿಂದ ೩೦ ರೂ.ಗಳಿಗೆ ಏರಿಕೆ ಮಾಡಲಾಗಿದೆ. ೨೦ ಕೆಜಿ ಲಗ್ಗೇಜ್ ಸಾಗಿಸಿದರೆ ೫ ರೂ. ಹೆಚ್ಚು ನೀಡಬೇಕಾಗಿದೆ. ಇದು ೫೦ ಕೆಜಿ ಲಗ್ಗೇಜ್ ಸಾಗಿಸುವವರಿಗೆ ಅನ್ವಯವಾಗಲಿದೆ. ಕನಿಷ್ಠ ೨ ಕಿ.ಮೀ. ೩೦ ರೂ. ನಿಗದಿ ಮಾಡಲಾಗಿದೆ. ನಂತರದ ಪ್ರತಿ ಕಿಲೋ ಮೀಟರ್ ದರ ೧೫ ರೂ. ಹೆಚ್ಚಿಸಲಾಗಿದೆ.
ಆಟೋ ದರ ಏರಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್‌ರವರು ಸ್ವಾಗತಿಸಿದ್ದಾರೆ.
ಬಹು ದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿ ಬಡ ಆಟೋ ಚಾಲಕರ ಬದುಕಿಗೆ ನೆರವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಊಟ, ತಿಂಡಿ, ಕಾಫಿ ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆಯನ್ನು ಹೋಟೆಲ್ ಮಾಲೀಕರು ಏರಿಕೆ ಮಾಡಿದ್ದಾರೆ. ಪಾರ್ಸೆಲ್ ದರ ಕೂಡ ಶೇ. ೫ ರಿಂದ ೧೦ ರಷ್ಟು ಹೆಚ್ಚಳವಾಗಿದ್ದು ಸ್ವಸಹಾಯ ಪದ್ಧತಿ ವ್ಯವಸ್ಥೆಯ ಹೋಟೆಲ್‌ಗಳಲ್ಲೂ ಹೋಟೆಲ್ ಮಾಲೀಕರು ಶೇ. ೫ ರಿಂದ ೧೦ ರಷ್ಟು ದರ ಹೆಚ್ಚಳ ಮಾಡಿದ್ದಾರೆ.
೨೦೨೦ರ ಜನವರಿಯಲ್ಲಿ ೧,೧೦೦ ಇದ್ದ ೧೯ ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ೨,೦೬೦ಗೆ ಏರಿದೆ. ಹೀಗಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡದೇ ವಿಧಿಯಿಲ್ಲ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ (ಬಿಬಿಎಚ್‌ಎ) ತಿಳಿಸಿದೆ.
ಆಹಾರ ಪದಾರ್ಥಗಳ ಬೆಲೆಯನ್ನು ಕನಿಷ್ಠ ಶೇ. ೧೦ರಷ್ಟು ಹೆಚ್ಚು ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಖರ್ಚು-ವೆಚ್ಚಕ್ಕೆ ಅನುಗುಣವಾಗಿ ಬೆಲೆಯನ್ನು ಶೇ. ಶೇಕಡಾ ೨೦ ರವರೆಗೆ ಹೆಚ್ಚಳ ಮಾಡುವ ಸಾಧ್ಯತೆಗಳೂ ಇವೆ.
‘ದೊಡ್ಡ ಹೋಟೆಲ್‌ಗಳು ಕನಿಷ್ಠ ಏರಿಕೆ ಮಾಡಿದರೂ ಹೇಗೆ ವ್ಯವಹಾರ ನಡೆಯುತ್ತದೆ. ಆದರೆ, ಸಣ್ಣ-ಪುಟ್ಟ ಹೋಟೆಲ್‌ಗಳು, ವಿಶೇಷವಾಗಿ ದರ್ಶಿನಿಗಳಲ್ಲಿನ ಆಹಾರ ಪದಾರ್ಥಗಳ ಬೆಲೆ ಕಡಿಮೆ. ಹೀಗಾಗಿ ಅವುಗಳು ಬೆಲೆಯನ್ನು ಶೇ. ೧೫ ರಿಂದ ೨೦ರ ವರೆಗೆ ಹೆಚ್ಚಳ ಮಾಡಿದರಷ್ಟೇ ಬದುಕುಳಿಯಲು ಸಾಧ್ಯ’ ಎಂದು ಬಿಬಿಎಚ್‌ಎ ಅಧ್ಯಕ್ಷ ಪಿ. ಸಿ. ರಾವ್ ಹೇಳಿದರು.
‘ಕಳೆದ ಎರಡು ವರ್ಷಗಳಲ್ಲಿ ಆಹಾರ ಧಾನ್ಯಗಳು, ತರಕಾರಿಗಳು ಮತ್ತು ಅಡುಗೆ ಎಣ್ಣೆಯ ಬೆಲೆ ಹೆಚ್ಚಾಗಿದೆ. ವಿದ್ಯುತ್, ಕಟ್ಟಡ ಬಾಡಿಗೆ, ಸಂಬಳ ಸೇರಿದಂತೆ ಹೋಟೆಲ್ ನಿರ್ವಹಣೆ ವೆಚ್ಚವೂ ಶೇ. ೧೫ರಷ್ಟು ಹೆಚ್ಚಾಗಿದೆ. ಹೀಗಾಗಿ, ಹೋಟೆಲ್ ಮಾಲೀಕರು ಈಗ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದರು.
ಬೆಲೆ ಏರಿಕೆಯ ಪರಿಣಾಮವಾಗಿ ರೆಸ್ಟೋರೆಂಟ್‌ಗಳಲ್ಲಿ ಮಸಾಲೆ ದೋಸೆಯ ಬೆಲೆ ೭೦ರಿಂದ ೭೫ಕ್ಕೆ ಜಿಗಿಯಬಹುದು. ಇಡ್ಲಿ ಪ್ರಿಯರು ತಮ್ಮ ನೆಚ್ಚಿನ ಉಪಹಾರಕ್ಕಾಗಿ ೫೫-೬೦ ನೀಡಬೇಕಾಗಿ ಬರಬಹುದು.
ದರ್ಶಿನಿಗಳು ಸೇರಿದಂತೆ ಎಲ್ಲಾ ರೆಸ್ಟೋರೆಂಟ್‌ಗಳಲ್ಲೂ ಕಾಫಿ, ಟೀ ಬೆಲೆ ೩-೫ ಏರಬಹುದು. ಗ್ರಾಹಕರು ಒಂದು ಕಪ್ ಕಾಫಿಗೆ ೨೦ ರವರೆಗೆ ಪಾವತಿಸಬೇಕಾಗಬಹುದು. ಚಹಾಕ್ಕೆ ೧೨-೧೫ ನೀಡಬೇಕಾಗಬಹುದು.
ರಾಜ್ಯಾದಾದ್ಯಂತ ಹೆಚ್ಚಳ
ರಾಜ್ಯದ ಇತರ ಭಾಗಗಳ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿನ ಆಹಾರ ಪದಾರ್ಥಗಳೂ ಶೇ. ೫ ರಿಂದ ೧೦ ರಷ್ಟು ಏರಿಕೆಯಾಗಲಿವೆ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ (ಕೆಪಿಎಚ್‌ಆರ್‌ಎ) ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಹೇಳಿದ್ದಾರೆ.
‘ನಾವು ಗ್ರಾಹಕರ ಮೇಲೆ ಹೊರೆ ಹೊರಿಸಲು ಬಯಸುವುದಿಲ್ಲ. ಹೀಗಾಗಿ ಭಾರಿ ಪ್ರಮಾಣದ ಬೆಲೆ ಏರಿಕೆ ಮಾಡುವುದಿಲ್ಲ. ಸದ್ಯಕ್ಕೆ ೫೦ ಇರುವ ದೋಸೆಯ ಬೆಲೆ ೫೫ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ವಾರದೊಳಗೆ ಹೊಸ ದರ ಜಾರಿಗೆ ಬರಲಿದೆ,’ ಎಂದು ಅವರು ಹೇಳಿದರು.

ಸೌತ್ ಇಂಡಿಯನ್ ಊಟ ೮೫ ರೂ. ನಿಂದ ೯೫ಕ್ಕೆ ಏರಿಕೆ

ರೈಸ್ ಬಾತ್ ೪೦ ರೂ. ನಿಂದ ೫೦ ರೂಪಾಯಿಗೆ ಹೆಚ್ಚಳ.

ರವಾ ಇಡ್ಲಿ ಬೆಲೆ ೪೦ ರೂ. ನಿಂದ ೪೫ ರೂಪಾಯಿಗೆ ಏರಿಕೆ.

ಅಕ್ಕಿ ರೊಟ್ಟಿ ಬೆಲೆ ೪೫ ರೂ. ನಿಂದ ೫೦ ರೂಪಾಯಿಗೆ ಏರಿಕೆ.

ಫ್ರೈಡ್ ರೈಸ್ ಬೆಲೆ ೧೦೦ ರೂ. ನಿಂದ ೧೧೦ ರೂಪಾಯಿಗೆ ಏರಿಕೆ.

ಗೋಬಿ ಮಂಚೂರಿ ಬೆಲೆ ೧ ಪ್ಲೇಟ್ ೧೦೦ ರೂ. ನಿಂದ ೧೧೦ ರೂಪಾಯಿಗೆ ಏರಿಕೆ.

ಪನ್ನೀರ್ ಮಂಚೂರಿ ಬೆಲೆ ೧೧೦ ರಿಂದ ೧೨೦ ರೂಪಾಯಿಗೆ ಹೆಚ್ಚಳ.