ಹೊಟೇಲ್ ಕಾರ್ಮಿಕನ ಹತ್ಯೆ: ಪತ್ನಿ-ಪ್ರಿಯಕರನ ಬಂಧನ


ಕಾಸರಗೋಡು, ನ.೧೭- ಗದಗ ಮೂಲದ ಹೋಟೆಲ್ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಹಾಗೂ ಪ್ರಿಯಕರನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಭಾಗ್ಯಶ್ರೀ (೩೨) ಮತ್ತು ಕರ್ನಾಟಕ ರಾಮಪುರದ ಅಲ್ಲಾ ಪಾಷಾ ( ೨೩) ಎಂದು ಗುರುತಿಸಲಾಗಿದೆ. ಮಂಗಳೂರಿನ ಕೊಡಿಯಾಲ್ ಬೈಲ್ ನ ಹೋಟೆಲ್ ವೊಂದರ ಕಾರ್ಮಿಕನಾಗಿದ್ದ ಗದಗದ ಹನುಮಂತ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ. ನ. ೫ರಂದು ಬೆಳಗ್ಗೆ ಕುಂಜತ್ತೂರು ಪದವಿನ ರಸ್ತೆಯಲ್ಲಿ ಹನುಮಂತ ಅವರ ಮೃತದೇಹ ಪತ್ತೆಯಾಗಿತ್ತು. ಸಮೀಪ ಸ್ಕೂಟರ್ ಕೂಡ ಪತ್ತೆಯಾಗಿತ್ತು. ಇದರಿಂದ ಆರಂಭದಲ್ಲಿ ಅಪಘಾತ ಎಂದು ಸಂಶಯ ಉಂಟಾಗಿತ್ತು. ಆದರೆ ಮರಣೋತ್ತರ ಪರೀಕ್ಷಾ ವರದಿಯಿಂದ ಕೊಲೆ ಎಂದು ಸಾಬೀತಾಗಿದೆ ಎಂದು ತಿಳಿದು ಬಂದಿದೆ. ಹನುಮಂತ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಬಂದಾಗ ಮನೆಯಲ್ಲಿ ಅಲ್ಲಾ ಪಾಷಾ ಇದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಗ್ವಾದ ನಡೆದು ಹನುಮಂತನನ್ನು ಕೊಲೆಗೈಯಲಾಗಿದೆ. ಬಳಿಕ ಮೃತದೇಹವನ್ನು ರಸ್ತೆಯಲ್ಲಿ ಎಸೆದು ಸ್ಕೂಟರ್ ಮಗುಚಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಹನುಮಂತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮಂಜೇಶ್ವರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಪಿ. ಶೈನು, ಸಬ್ ಇನ್ಸ್ ಪೆಕ್ಟರ್ ರಾಘವನ್ ನೇತೃತ್ವದ ತಂಡ ತನಿಖೆ ನಡೆಸಿತ್ತು. ಸಿಬಂದಿ ಥೋಮಸ್, ಮನು, ಸಂತೋಷ್, ಪ್ರವೀಣ್, ಉದೇಶ್, ಬಾಲಕೃಷ್ಣ, ನಾರಾಯಣ, ರಾಜೇಶ್, ಆಸ್ಟಿನ್ ತಂಬಿ, ಸಜೀಶ್, ಲಕ್ಷ್ಮಿ ನಾರಾಯಣ ತಂಡದಲ್ಲಿದ್ದರು.