ಹೊಟೇಲ್‍ನಲ್ಲಿ ಸ್ವಚ್ಛತೆ ಕೊರತೆ: 10 ಸಾವಿರ ರೂ. ದಂಡ ವಿಧಿಸಿದ ಅಧಿಕಾರಿಗಳು

ಲಕ್ಷ್ಮೇಶ್ವರ, ಮಾ27: ಇಲ್ಲಿನ ಹೊಸ ಬಸ್ ನಿಲ್ದಾಣದ ಕ್ಯಾಂಟೀನ್ ಮೇಲೆ ಶುಕ್ರವಾರ ದಿಡೀರ್‍ನೇ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹಾಗೂ ಸಿಬ್ಬಂದಿ ಸ್ವಚ್ಛತೆ ಕೊರತೆ ಇರುವುದನ್ನು ಗಮನಿಸಿದ ಅವರು ಮಾಲಿಕರಿಗೆ 10 ಸಾವಿರ ರೂಪಾಯಿಗಳ ದಂಡ ವಿಧಿಸಿದರು.
ನಂತರ ದುರ್ಗಾ ಹೊಟೇಲ್‍ಗೆ ಭೇಟಿ ನೀಡಿದ ಅವರು ಅಲ್ಲಿ ಗ್ರಾಹಕರು ಹಾಗೂ ಹೊಟೇಲ್ ಸಿಬ್ಬಂದಿ ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ ಹೊಟೇಲ್‍ನವರಿಗೆ ಒಂದು ಸಾವಿರ ದಂಡ ವಿಧಿಸಿದರು. ನಂತರ ಕರ್ನಾಟಕ ಹೊಟೇಲ್, ಭಾರತ ಹೊಟೇಲ್, ಬೇಕರಿ, ಡಾಬಾಗಳ ಮೇಲೂ ದಾಳಿ ನಡೆಸಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು ಮಾತನಾಡಿ `ಕೊರೊನಾ ಎರಡನೇ ಅಲೆ ಹೆಚ್ಚುತ್ತಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಮಾಸ್ಕ್ ಇಲ್ಲದೆ ತಿರುಗಾಡುವವರಿಗೆ ದಂಡ ಹಾಕಲಾಗುವುದು. ಮತ್ತು ಹೊಟೇಲ್, ಡಾಬಾ, ಬೇಕರಿಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರನ್ನು ಇಡಬೇಕು. ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದರು.
ಆರ್.ಎಂ. ಪಾಟೀಲ, ಮಂಜುನಾಥ ಮುದಗಲ್ಲ, ಬಸವರಾಜ ಬಳಗಾನೂರ, ಬಸಣ್ಣ ನಂದೆಣ್ಣವರ ಇದ್ದರು.