ಹೊಟೇಲ್‍ಗಳಂತೆ ಪ್ರತೀ ಬೀದಿಯಲ್ಲೂ ಪುಸ್ತಕ ಅಂಗಡಿಗಳಿರಬೇಕು : ವೀರಕಪುತ್ರ ಶ್ರೀನಿವಾಸ

ಬೀದರ:ಜೂ.11: ಪ್ರತಿಯೊಬ್ಬರೂ ಉದ್ಯೋಗದ ಜೊತೆಗೆ ಸಾಹಿತ್ಯ ಸೇವೆ ಮಾಡಬೇಕು. ಯುವಕರಲ್ಲಿ ಪುಸ್ತಕ ಓದುವ ಸಂಸ್ಕøತಿಯನ್ನು ಬೆಳೆಸಬೇಕು. ಹೊಟೇಲ್‍ಗಳು, ಬಟ್ಟೆ ಅಂಗಡಿಗಳು ಪ್ರತೀ ಬೀದಿಯಲ್ಲಿ ಇರುವಂತೆ ಪುಸ್ತಕದ ಅಂಗಡಿಗಳನ್ನೂ ಸ್ಥಾಪಿಸಬೇಕಾದ ಅವಶ್ಯಕತೆ ಇಂದಿನ ಕಾಲದಲ್ಲಿದೆ. ಜೋ ದಿಖೇಗಾ ವೋ ಬಿಕೆಕಾ ಎನ್ನುವಂತೆ ಹೆಜ್ಜೆ ಹೆಜ್ಜೆಗೂ ಮಾರುಕಟ್ಟೆಯಲ್ಲಿ ಪುಸ್ತಕಗಳು ಕಣ್ಣಿಗೆ ಕಾಣಬೇಕೆಂದು ವೀರಲೋಕ ಬುಕ್ಸ್ ಬೆಂಗಳೂರಿನ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ತಿಳಿಸಿದರು.

ವೀರಲೋಕ ಬುಕ್ಸ್ ಬೆಂಗಳೂರು ಮತ್ತು ಅತಿವಾಳೆ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆದ ದೇಸಿ ಜಗಲಿ ಕಥಾಕಮ್ಮಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಇಂದು ಬೆಂಗಳೂರು ನಗರದಲ್ಲಿ ವೀರಲೋಕ ಬುಕ್ಸ್ ಸಂಸ್ಥೆ ವತಿಯಿಂದ ನಾವು 300 ಕಡೆಗಳಲ್ಲಿ ಪುಸ್ತಕ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ. ಬೆಳಗಾದರೆ ಕ್ರೇಡಿಟ್ ಕಾರ್ಡ್, ಮೊಬೈಲ್ ಮತ್ತು ಸಾಲ ಬೇಕಾ? ಎಂದು ಕರೆಗಳು ಬರುತ್ತವೆ. ಆದರೆ ಪುಸ್ತಕ ಬೇಕಾ? ಯಾವ ಪುಸ್ತಕ ಬೇಕೆಂದು ಕರೆ ಬರುವುದೇ ಇಲ್ಲ. ಅದರೆ ನಮ್ಮ ಸಂಸ್ಥೆ ವತಿಯಿಂದ ಜನರಿಗೆ ಕರೆ ಮಾಡಿ ಪುಸ್ತಕ ಬೇಕಾ? ಎಂದು ಕೇಳುತ್ತೇವೆ. ಹೀಗಾಗಿಯೇ ರಾಜ್ಯದಾದ್ಯಂತ ಒಂದು ವರ್ಷದಲ್ಲಿ 20 ಸಾವಿರ ಪುಸ್ತಕಗಳನ್ನು ಮನೆತನಕ ಕಳುಹಿಸಿದ್ದೇವೆ ಎಂದರು. ಇಂದು ಪ್ರತಿಯೊಂದು ಸಾಮಾನಿಗೆ ಬ್ರಾಂಡ್ ಅಂಬಾಸಿಡರ್ ನೇಮಕ ಮಾಡುತ್ತಾರೆ. ಆದರೆ ಪುಸ್ತಕಗಳಿಗೆ ಬ್ರಾಂಡ್ ಅಂಬಾಸಿಡರ್ ಇಲ್ಲ. ಹೀಗಾಗಿ ನಾವು ನಮ್ಮ ಸಂಸ್ಥೆ ವತಿಯಿಂದ ರಮೇಶ ಅರವಿಂದ್ ಅವರನ್ನು ನೇಮಕ ಮಾಡಿ ಪುಸ್ತಕ ಸಂಸ್ಕøತಿ ಬೇಳೆಸುತ್ತಿದ್ದೇವೆ. ಹಳ್ಳಿಗಳಲ್ಲೂ ಕುವೆಂಪು ಬೇಂದ್ರೆರಂತಹ ಕಥೆಕಾರರು ಸಿಗಬಹುದು ಎಂಬ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಕಥಾ ಕಮ್ಮಟ ಏರ್ಪಡಿಸಿ ಕಥೆ ಕಾದಂಬರಿಕಾರರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಅದನ್ನು ಶರಣರ ಭೂಮಿ ಬೀದರನಿಂದಲೇ ಆರಂಭ ಮಾಡಿದ್ದು ಸಂತಸವೆನಿಸುತ್ತಿದೆ. ನಾವು ಇದುವರೆಗೆ 1 ವರ್ಷದಲ್ಲಿ 44 ಕೃತಿಗಳನ್ನು ಪ್ರಕಟಣೆ ಮಾಡಿದ್ದೇವೆ. ಕಥಾಕಾರರಿಗೆ ವೀರಲೋಕ ಸೇತುವೆಯಾಗಿ ಕಾರ್ಯ ಮಾಡಲಿದೆ. ಆದ್ದರಿಂದ ಜಿಲ್ಲೆಯಲ್ಲಿನ ಕಥಾಕಾರರು ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕೆಂದು ಪ್ರೋತ್ಸಾಹದ ನುಡಿಗಳನ್ನಾಡಿದರು. ವಿದೇಶದಲ್ಲಿ ಒಬ್ಬ ಕವಿ ತನ್ನ ಸಾಹಿತ್ಯ ಬರೆಯಲು ಆರಂಭಿಸಿದರೆ ಆ ಕೃತಿ ಖರೀದಿಸಲು ಆರು ತಿಂಗಳು ಮೊದಲೇ ಬುಕಿಂಗ್ ಆರಂಭವಾಗುತ್ತವೆ. ಆದರೆ ನಮ್ಮಲ್ಲಿ ಕೃತಿ ರಚಿಸಿ, ಮನೆಯಲ್ಲಿಟ್ಟು, ಕೈಯಲ್ಲಿ ಹಿಡಿದುಕೊಂಡು ಓಡಾಡಿದರೂ ಯಾರೂ ಕೂಡಾ ಖರೀದಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಖ್ಯಾತ ಕಥೆಗಾರರಾದ ಬಾಳಾಸಾಹೇಬ ಲೋಕಾಪುರ ಮಾತನಾಡಿ ಕಥೆ ಎಂದರೆ ವ್ಯಕ್ತಿಯ ಸಂವೇದನೆ. ತನ್ನ ವೈಯಕ್ತಿಕ ವೇದನೆಗಳೇ ಕಥೆಯಾಗಿ ಮಾರ್ಪಡುತ್ತವೆ. ನಮ್ಮ ವೇದನೆ ಕೇಳಿ ಜನರ ಕಣ್ಣಲ್ಲಿ ನೀರು ಬಂದರೆ ಅದೇ ಕಥೆ. ಜನರ ಹೃದಯಕ್ಕೆ ಮುಟ್ಟಿದರೆ ಅದೇ ಕಥೆ. ಅಂತಹ ಗಟ್ಟಿ ಸಾಹಿತ್ಯದ ಕಥೆಗಳನ್ನು ರಚಿಸಬೇಕೆಂದು ಸಲಹೆ ನೀಡಿದರು.

ಅತಿವಾಳೆ ಸಾಂಸ್ಕøತಿಕ ಮತ್ತು ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾದ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ ಬೀದರ ಜಿಲ್ಲೆಯ ಉದಯೋನ್ಮುಖ ಕಥೆಗಾರರಿಗೆ ಇನ್ನೂ ಹೆಚ್ಚಿನ ಸಹಕಾರವಾಗಲೆಂದು ಈ ಕಥಾಕಮ್ಮಟ ಏರ್ಪಡಿಸಲಾಗಿದೆ. ಆಸಕ್ತರು ಎರಡು ದಿವಸಗಳ ಕಾಲ ನಡೆಯುವ ಈ ದೇಸಿ ಜಗಲಿ ಕಥಾಕಮ್ಮಟದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗುರುನಾಥ ರಾಜಗಿರಾ ಮಾತನಾಡಿ ಕಥೆ ಹೇಗಿರಬೇಕು? ಹೇಗೆ ರಚಿಸಬೇಕು ಎಂಬುದನ್ನು ತಿಳಿಸುವುದೇ ಈ ಕಥಾಕಮ್ಮಟದ ಉದ್ದೇಶ. ವೀರಲೋಕ ಬುಕ್ಸ್ ಅಧ್ಯಕ್ಷ ಶ್ರೀನಿವಾಸ ಅವರು ಕೋಟ್ಯಾಧೀಶರಾದರೂ ಕೂಡಾ ಪುಸ್ತಕ ಸಂಸ್ಕøತಿ ಬೆಳೆಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಾಹತ್ಯ ಮಾನವೀಯ ಪಂಥದ ಆಧಾರದ ಮೇಲೆ ರಚನೆಯಾಗಬೇಕೆಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಡಾ. ಸಂಜೀವಕುಮಾರ ಅತಿವಾಳೆ ನಿರೂಪಿಸಿದರು. ಡಾ. ಶಾಮ ನೆಲವಾಡೆ ಸ್ವಾಗತಿಸಿದರು. ರೇಣುಕಾ ಎನ್.ಬಿ. ಪ್ರಾರ್ಥಿಸಿದರು. ಡಾ. ಸುನಿತಾ ಕೂಡ್ಲಿಕರ್ ವಂದಿಸಿದರು. ವೇದಿಕೆ ಮೇಲೆ ಖ್ಯಾತ ಕಥೆಗಾರರಾದ ಗುರುನಾಥ ಅಕ್ಕಣ್ಣ, ಶಿವಕುಮಾರ ನಾಗವಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಜಿಯಾ ಬಳಬಟ್ಟಿ, ಡಾ. ರಾಮಚಂದ್ರ ಗಣಾಪುರ, ಅವಿನಾಶ ಸೋನೆ, ಲಕ್ಷ್ಮೀ ಮೇತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹಲವಾರು ಸಾಹಿತಿಗಳು ಕಥಾಕಮ್ಮಟದ ಸದುಪಯೋಗ ಪಡೆದುಕೊಂಡರು.