ಹೊಗೆರಹಿತ ಪರಿಸರ ನಿರ್ಮಿಸಲು ಸಲಹೆ

ಹೊನ್ನಾಳಿ.ಜ.೯; ಹೊಗೆರಹಿತ ಪರಿಸರ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಬೆಂಗಳೂರಿನ ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ರಾಜ್ಯ ಸಂಯೋಜಕಿ ಸಂಧ್ಯಾ ಹೇಳಿದರು.ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ನವೀಕರಿಸಬಹುದಾದ ಇಂಧನ, ಪರಿಸರ ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲು ಕುರಿತು ಗೋವಿನಕೋವಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರಿಗೆ  ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರ ಮಾಲಿನ್ಯ ತಡೆಗಟ್ಟುವುದು ಇಂದಿನ ಜರೂರಾಗಿದೆ. ಆದ್ದರಿಂದ, ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.ರೈತ ಮಹಿಳೆಯರು ತಮ್ಮ ಜಮೀನುಗಳಲ್ಲಿ ಹೊಂಗೆ, ಬೇವು, ಜಟ್ರೋಪ ಮತ್ತಿತರ ತಳಿಗಳ ಗಿಡ-ಮರಗಳನ್ನು ಬೆಳೆಸಿ ಆರ್ಥಿಕವಾಗಿ ಸಬಲರಾಗಬೇಕು. ಜಮೀನುಗಳ ಬದುವಿನಲ್ಲಿ ಬೆಳೆಸುವ ಗಿಡ-ಮರಗಳನ್ನು ನಮ್ಮ ಸಂಸ್ಥೆಯಿAದ ಖರೀದಿಸಿ ಇಂಧನ ಉತ್ಪಾದನೆಗೆ ಬಳಸಲಾಗುವುದು. ಈ ಮೂಲಕ ಎಸ್ಸೆಸ್ಸೆಲ್ಸಿ, ಐಟಿಐ ಶಿಕ್ಷಣ ಪಡೆದ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿದರು.ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರ ವ್ಯವಸ್ಥಾಪಕ ವಿಜಯಕುಮಾರ್ ಮಾತನಾಡಿ, ರೈತ ಮಹಿಳೆಯರು ತಮ್ಮ ಜಮೀನುಗಳಲ್ಲಿ ಒಂದೇ ಬೆಳೆಯನ್ನು ಬೆಳೆಯದೇ ಬೆಳೆ ಪರ್ಯಾಯ ಪದ್ಧತಿ ಅನುಸರಿಸಬೇಕು. ದ್ವಿದಳ ಧಾನ್ಯಗಳಾದ ಶೇಂಗಾ, ಔಡಲ, ಕುರಸಣೆ, ತೊಗರಿ, ಅವರೆ, ಕಡಲೆ, ಅಲಸಂದೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದರೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಕೀಟಬಾಧೆ ಕಡಿಮೆಯಾಗಿ ಆರ್ಥಿಕವಾಗಿ ಸಬಲರಾಗುತ್ತೀರಿ ಎಂದು ತಿಳಿಸಿದರು.ಗೋವಿನಕೋವಿ ಗ್ರಾಪಂ ಪಿಡಿಒ ಬಿ. ಚಿನ್ನಯ್ಯ ಮಾತನಾಡಿ ರೈತರು ಮತ್ತು ಮಹಿಳಾ ಸಂಘಗಳು ಭಾಗಿಯಾದರೆ ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಯಾಗುತ್ತದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.ಮಳೆ ನೀರು ಕೊಯ್ಲು ಬಗ್ಗೆ ಕಾರ್ಯಕ್ರಮ ಯೋಜನಾಧಿಕಾರಿ ಕೃಷ್ಣ ಮಾಹಿತಿ ನೀಡಿದರು.ಕಾರ್ಯಕ್ರಮ ಸಂಯೋಜಕಿ ಸುಜಾತ, ರಮೇಶ್, ಹೇಮಾವತಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.ಬೆಂಗಳೂರಿನ ಮಹಾತ್ಮಾ ಗಾಂಧೀ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ದಾವಣಗೆರೆಯ ಸ್ಫೂರ್ತಿ ಸಂಸ್ಥೆ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳ ಸಂಯುಕ್ತ ಆಶ್ರಯದಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.