ಸಿದ್ದು ಸವಾಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೨:ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾನು ವಿರೋಧ ಪಕ್ಷದಲ್ಲಿದ್ದಾಗ ಯಾವುದೇ ಸಚಿವರ ಮನೆಗೆ ಹೋಗಿದ್ದಾಗಲಿ, ಹೊಂದಾಣಿಕೆ ಮಾಡಿಕೊಂಡಿದ್ದಾಗಲಿ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದರು.ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ, ೧೯೮೩ ರಿಂದ ಸದನದಲ್ಲಿದ್ದೇನೆ, ನನ್ನ ಜತೆ ಸದನಕ್ಕೆ ಬಂದವರಲ್ಲಿ ಬಿ.ಆರ್ ಪಾಟೀಲ್, ದೇಶ್‌ಪಾಂಡೆ ಬಿಟ್ಟು ಬೇರೆಯವರ್‍ಯಾರು ಇಲ್ಲ, ಅಂದಿನಿಂದ ಇಲ್ಲಿಯವರೆಗೆ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲರ ವಂದನಾ ಭಾಷಣದ ಮೇಲೆ ಜೆಡಿಎಸ್ ಶಾಸಕ ಕುಮಾರಸ್ವಾಮಿ ಮಾತನಾಡುತ್ತಿದ್ದಾಗ ಗೃಹಜ್ಯೋತಿ ಇನ್ನಿತರ ಗ್ಯಾರಂಟಿ ವಿಷಯಗಳಲ್ಲಿ ಸರ್ಕಾರ ನುಡಿದಂತೆ ಸಂಪೂರ್ಣವಾಗಿ ನಡೆದಿಲ್ಲ ಎಂದು ಆರೋಪಿಸಿದಾಗ ಬಿಜೆಪಿಯ ಯತ್ನಾಳ್ ೨೦೦ ಯೂನಿಟ್ ವಿದ್ಯುತ್ ಉಚಿತ ಎಂದಿದ್ದೀರಿ ಈಗ ಷರತ್ತು ಏಕೆ ಹಾಕುತ್ತಿರಾ ಎಂದು ಪ್ರಶ್ನಿಸಿದರು.
ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು, ಯತ್ನಾಳ್ ಅವರೇ ನೀವು ಉತ್ತಮ ಸಂಸದೀಯ ಪಟು ಎಂದು ಭಾವಿಸಿದ್ದೇನೆ, ಆಗಾಗ ನೀವು ಎದ್ದು ನಿಂತರೆ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಗುತ್ತದೆ ಎಂದುಕೊಂಡಿದ್ದೀರಾ, ಆದರೆ, ನನ್ನ ಮಾಹಿತಿ ಪ್ರಕಾರ ನಿಮ್ಮನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವುದಿಲ್ಲ ಎಂದು ಕೆಣಕಿದರು.
ನಮ್ಮವರೊಂದಿಗೆ ನಿಮ್ಮದು ಹೊಂದಾಣಿಕೆ ಇರಬಹುದು. ಅದಕ್ಕಾಗಿ ನೀವು ನನ್ನನ್ನು ವಿರೋಧ ಪಕ್ಷದ ನಾಯಕನಾಗುವುದಿಲ್ಲ ಎನ್ನುತ್ತಿದ್ದೀರಾ ಎಂದು ಯತ್ನಾಳ್ ಕೆಣಕಿದರು. ಇದರಿಂದ ಕೆರಳಿದ ಮುಖ್ಯಮಂತ್ರಿಗಳು ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಯಾರಾದರೂ ಅದನ್ನು ಸಾಬೀತುಮಾಡಿದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದರು.ಗೃಹಜ್ಯೋತಿ ಯೋಜನೆಯಡಿ ೧ ವರ್ಷದ ಸರಾಸರಿಯನ್ನು ಪರಿಗಣನೆಗೆ ತೆಗೆದುಕೊಂಡು ೨೦೦ ಯೂನಿಟ್‌ವರೆಗೆ ಉಚಿತವಾಗಿ ನೀಡಲಾಗುತ್ತಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.ಅನ್ನಭಾಗ್ಯ ಗ್ಯಾರಂಟಿಯಡಿ ೧ ಕೋಟಿ ೨೮ ಲಕ್ಷ ಕುಟುಂಬಗಳ ೪ ಕೋಟಿ ೪೮ ಲಕ್ಷ ಫಲಾನುಭವಿಗಳಿಗೆ ೧೦ ಕೆಜಿ ಅಕ್ಕಿ ಕೊಡುವವರೆಗೆ ತಲಾ ೧೭೦ ರೂ.ಗಳನ್ನು ಡಿಪಿಟಿ ಮೂಲಕ ತಲುಪಿಸುತ್ತೇವೆ ಎಂದರು.ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳ ಬ್ಯಾಂಕ್ ಖಾತೆಗಳೇ ನಮ್ಮ ಬಳಿಯಲ್ಲಿ ಇಲ್ಲ ಎನ್ನುವ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಯ ಹೆಸರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುತ್ತೇವೆ ಎಂದರು.