ಹೊಂಗಿರಣ ಸಭಾಂಗಣದಲ್ಲಿ ರಂಗಸಂಭ್ರಮ
 ಸೀತಾಪಹರಣ ನಾಟಕ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.25 :ಉತ್ತರ ಭಾರತದಲ್ಲಿ ಡೋಲಾಕ್ ವಾದ್ಯ ನಾದಕ್ಕೆ ಜನ ಮನಸೋತರೆ,ದಕ್ಷಿಣ ಭಾರತ ಅದರಲ್ಲಿ ಕಲ್ಯಾಣ ಕರ್ನಾಟಕದ ಜನ ಹಾರ್ಮೋನಿಯಂ ಹಾಗೂ ಕಂಚಿನ ತಾಳಗಳ ವಾದ್ಯ ನಾದಕ್ಕೆ ಮನಸೋತಿದ್ದಾರೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದ್ದಾರೆ.
ಅವರು ಇಂದು ನಗರದ ಸಾಂಸ್ಕೃತಿಕ ಸಮುಚ್ಚಯದ  ಹೊಂಗಿರಣ ಸಭಾಂಗಣದಲ್ಲಿ ಓಂ ಶ್ರೀ ಗಾನಯೋಗಿ ಯುವ ಕಲಾ ಸಂಘ,ಗುಡದೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಂಗಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಗಭೂಮಿಯಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಎಂಬ ವಿಧಗಳಿವೆ. ರಂಗಭೂಮಿಯಲ್ಲಿ ತೊಡಗಿದ ಕಲಾವಿದರಿಗೆ ಪ್ರೋತ್ಸಾಹ ದೊರಯಬೇಕಿದೆ.ಆಗಾದಾಗ ಮಾತ್ರ ಅವರ ಬದುಕು ಹಸನುಗೊಳ್ಳತ್ತದೆ.ನಾಡಿನ ರಂಗಭೂಮಿ,ನಾಟಕ,ಬಯಲಾಟ,ನೃತ್ಯ ಹಾಗೂ ಜನಪದ ಸಾಹಿತ್ಯ ಜೀವಂತವಾಗಿ ಉಳಿತ್ತವೆ.ಮುಂದಿನ ಪೀಳಿಗೆ ತಿಳಿಯಲು ಅನುಕೂಲವಾಗುತ್ತದೆ ಎಂದರು.
ಉಪನ್ಯಾಸಕ ಬಿ.ಖಾಸೀಂಸಾಬ್ ಡೋಲಾಕ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ,ಕಲಾವಿದರಿಗೆ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಭಿನಯ ಕಲಾ ಕೇಂದ್ರದ  ಅಧ್ಯಕ್ಷ ಕೆ.ಜಗದೀಶ್  ಯುವಕರಿಗೆ ಭವಿಷ್ಯ ಇದೆ. ಶ್ರದ್ಧೆ ಬೆಳೆಸಿಕೊಂಡು,ಉನ್ನತ ಗುರಿಯೊಂದಿಗೆ ಜೀವಿಸಿ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.
 ಸನ್ಮಾರ್ಗ ಗೆಳೆಯರ ಬಳಗದ ಕಪ್ಪಗಲ್ಲು ಬಿ.ಚಂದ್ರಶೇಖರ್ ಆಚಾರ್, ಕೆ.ನಾಗರಾಜ, ಕಲಾ ಸಂಘದ ಅಧ್ಯಕ್ಷ ವೈ.ಭಾರತೀಶ್,ಕಾರ್ಯದರ್ಶಿ ರಾಘವೇಂದ್ರ ಸ್ವಾಮಿ. ಎನ್.ಚಂದ್ರು ಬಸಾಪುರ,ಪ್ರಕಾಶ್ ಪೂಜಾರ್ ಮುಂತಾದವರು ಉಪಸ್ಥಿತರಿದ್ದರು.
ದೊಡ್ಡ ಬಸಪ್ಪ. ಬಿ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಹುಲಿಯಪ್ಪ.ಡಿ ಮತ್ತು ತಂಡದಿಂದ ‘ಸೀತಾಪಹರಣ’  ಪೌರಾಣಿಕ ನಾಟಕ ಪ್ರದರ್ಶನ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಂಗ ಕಲಾವಿದ ಮಂಜು ಸಿರಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.