ಹೈ-ಕ ವಿಮೋಚನೆ ಇತಿಹಾಸ ಪಠ್ಯವಾಗಲಿ

ಕಲಬುರಗಿ:ಸೆ.02: ಹೈದ್ರಬಾದ್ ಕರ್ನಾಟಕ ವಿಮೋಚನೆ, ಹೋರಾಟ ಇತಿಹಾಸದ ಕುರಿತು ಪ್ರೌಢ ಶಿಕ್ಷಣ ಪಠ್ಯದಲ್ಲಿ ಅಳವಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
ನಗರದ ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿತ್ ದಕ್ಷಿಣ ವಲಯ ಹಾಗೂ ಗುರುಕುಲ ಪದವಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಹೈ-ಕ ವಿಮೋಚನ ಕುರಿತ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಇಡೀ ದೇಶಕ್ಕೆ ಸ್ವತಂತ್ರ ಸಿಕ್ಕು ಒಂದು 13 ತಿಂಗಳ ನಂತರ ನಮ್ಮ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಿಜಾಮನ ಕಪಿಮುಷ್ಠಿಯಿಂದ ನಾವು ವಿಮೋಚನೆಯಾಗಬೇಕಾದರೆ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ಭಾರತದ ಒಕ್ಕೂಟದಲ್ಲಿ ಸೇರಲು ನಿಜಾಮ ಒಪ್ಪಿರಲಿಲ್ಲ. ಹೀಗಾಗಿ ಅಂದಿನ ಗೃಹ ಸಚಿವರಾಗಿದ್ದ ಸರದಾರ್ ವಲ್ಲಭ ಭಾಯಿ ಪಟೇಲ್‍ರು ಮುತುವರ್ಜಿ ವಹಿಸಿ ಭಾರತೀಯ ಸೇನೆಯ ಸಹಾಯದಿಂದ ಹೈದ್ರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ ಕೊಡಿಸಿದ್ದಾರೆ. ಪ್ರತಿಯೊಬ್ಬರು ಪಟೇಲ್‍ರನ್ನು ಸಮರಿಸಬೇಕು ಎಂದರು.
ಹೈದ್ರಾಬಾದ ಕರ್ನಾಟಕ (ಇಂದಿನ ಕಲ್ಯಾಣ ಕರ್ನಾಟಕ) ಪ್ರದೇಶ ವಿಮೋಚನೆಗಾಗಿ ನಡೆದ ಹೋರಾಟ, ರಜಾಕರರ ಹಾವಳಿ, ವಿಮೋಚನಾ ಹೋರಾಟದ ರೂವಾರಿಯಾಗಿದ್ದ ರಮಾನಂದತೀರ್ಥರ, ಸರದಾರ್ ಶರಣಗೌಡ ದುಮ್ಮದ್ರಿ ಸೇರಿದಂತೆ ವಿಮೋಚನಾ ಹೋರಾಟಗಾಗರರ ಬಗ್ಗೆ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿನ ವಿಷಯಗಳನ್ನು ಓದಿದರೆ ಸಾಲದು ನಮ್ಮ ದೇಶ, ನಾಡು, ನುಡಿ, ಇತಿಹಾಸ, ಸಂಸ್ಕøತಿ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೋರಾಟಗಾರ ಎಂ.ಎಸ್.ಪಾಟೀಲ್ ನರಬೋಳಿ ಮುಖ್ಯ ಅತಿಥಿಯಾಗಿದ್ದರು.
ಪ್ರಾಚಾರ್ಯ ಸಂಜೀವ.ಆರ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ದಕ್ಷಿಣ ವಲಯದ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಂಬಳಿಮಠ, ಸಹ ಕಾರ್ಯದರ್ಶಿ ಮಲ್ಲಿನಾಥ ಸಂಗಶೆಟ್ಟಿ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕಾವ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕನ್ನಡ ಪ್ರಾಧ್ಯಾಪಕ ಶರಣು ಹಲಚೇರಾ ಸ್ವಾಗತಿಸಿದರು.

ಹೈದ್ರಾಬಾದ್ ಕರ್ನಾಟಕ ವಿಮೋಚನಾ ಕುರಿತು ಒಂದು ತಿಂಗಳ ವರೆಗೆ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ನಮ್ಮ ಭಾಗದ ಇತಿಹಾಸ ತಿಳಿಸಿಕೊಡುವ ಪ್ರಯತ್ನ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯ ಮಾಡುತ್ತಿದೆ.

  • ಶಾಮಸುಂದರ ಕುಲಕರ್ಣಿ,
    ಅಧ್ಯಕ್ಷರು, ಕಸಾಪ ದಕ್ಷಿಣ ವಲಯ