ಹೈಸ್ಕೂಲ್ ಮೈದಾನದಲ್ಲಿ ಕಸದರಾಶಿ; ವಾಯುವಿಹಾರಿಗಳ ಅಸಮಾಧಾನ


ದಾವಣಗೆರೆ.ನ.೨೨; ದೀಪಾವಳಿ ಹಬ್ಬ ಮುಗಿದು ಒಂದು ವಾರ ಕಳೆದಿದೆ ಆದರೆ ನಗರದ ಪ್ರಮುಖ ಭಾಗ ಎಂದೇ ಕರೆಯಲ್ಪಡುವ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟದಿಂದ ಹಾಗಿರುವ ಕಸದರಾಶಿಯನ್ನು ಸ್ವಚ್ಛಗೊಳಿಸಲು ಮಹಾನಗರ ಪಾಲಿಕೆ ಮೀನಾಮೇಷ ಎಣಿಸುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಕಾಂಗ್ರೆಸ್ ಮುಖಂಡ ಹರೀಶ್ ಬಸಾಪುರ ಮಾತನಾಡಿ ವಿಸ್ತಾರವಾದ ಹೈಸ್ಕೂಲ್ ಮೈದಾನ ಬಸ್ಟ್ಯಾಂಡ್ ಗಳ ನಿರ್ಮಾಣದಿಂದ ಮೈದಾನದ ಜಾಗದ ವಿಸ್ತೀರ್ಣ ಕಡಿಮೆಯಾಗುತ್ತಾ ಬಂದಿದೆ.ಅದರ ಮೇಲೆ ಈಗ ಪಟಾಕಿ ಮಳಿಗೆಗಳ ನಿರ್ಮಾಣ, ಹಬ್ಬ ಮುಗಿದು ಒಂದು ವಾರವಾದರೂ ಸಹ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಮೈದಾನವನ್ನು ಸ್ವಚ್ಛ ಮಾಡದೇ ಇರುವುದನ್ನು ನೋಡಿದರೆ ಅಧಿಕಾರ ಮಾಡುವ ನಾಯಕರು ಕೇವಲ ಮೈದಾನದಿಂದ ಬರುವ ಆದಾಯದ ಮೇಲೆ ಗಮನವಿದೆ ಹೊರತು ಸ್ವಚ್ಛತೆಯ ಮೇಲೆ ಇಲ್ಲ ಎಂಬುದು ಎದ್ದು ಕಾಣುತ್ತಿದೆ, ಸ್ವತಃ ಮೇಯರ್ ಪ್ರತಿನಿಧಿಸುವವಾರ್ಡ್‌  ಪರಿಸ್ಥಿತಿಯೇ ಹೀಗಾದರೆ ಇನ್ನು ನಗರದ ಪರಿಸ್ಥಿತಿ ಹೇಗೆ ಸಾಧ್ಯ. ಬಸ್ ನಿಲ್ದಾಣ ಇಲ್ಲಿಯೇ ಇದೆ.ಪಕ್ಕದಲ್ಲಿ ಮಹಾನಗರ ಪಾಲಿಕೆ ಇದೆ.ಸದಾ ಜನರಿಂದ ಹೈಸ್ಕೂಲ್ ಮೈದಾನ ತುಂಬಿರುತ್ತದೆ.ಆದರೆ ಇಲ್ಲಿ ಸ್ವಚ್ಚತೆ ಮಾತ್ರ ಹೆಸರಿಗಷ್ಟೆ ಎನ್ನುವಂತಾಗಿರುವುದು ದುರಂತ ಎಂದಿದ್ದಾರೆ. ವಾಯುವಿಹಾರಿಗಳು ನಿತ್ಯದ ಬವಣೆಯಿಂದ ಬೇಸತ್ತಿದ್ದಾರೆ.ಮುಕ್ತ ಸಂಚಾರ ಸಾಧ್ಯ ವಾಗುತ್ತಿಲ್ಲ.ಇಲ್ಲಿನ ಪರಿಸರ ಮಾಲಿನ್ಯದಿಂದ ಬೇಸತ್ತಿದ್ದಾರೆ. ಮಹಾನಗರ ಪಾಲಿಕೆ ಇನ್ನಾದರೂ ಇತ್ತ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.