ಹೈವೇ ಬ್ರಿಡ್ಜ್ ಗೆ ಡಿಕ್ಕಿ : ವಿಆರ್ ಎಲ್ ಲಾರಿಗೆ ಬೆಂಕಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.16 :-  ಚಿತ್ರದುರ್ಗ ಕಡೆಯಿಂದ ಕೂಡ್ಲಿಗಿ ಕಡೆಗೆ ಹೊರಟಿದ್ದ ಕಂಟೆನರ್ ಲಾರಿಯೊಂದು ಹೈವೇ ಬ್ರಿಡ್ಜ್ ಗೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾದ ಪರಿಣಾಮ ಬೆಂಕಿ ಹತ್ತಿ ಧಗ ಧಗ ಉರಿದ ಘಟನೆ ತಾಲೂಕಿನ ಅಮಲಾಪುರ ಸಮೀಪದ ಹೈವೇ 50ರಸ್ತೆಯಲ್ಲಿ ಇಂದು ಬೆಳಿಗ್ಗೆ 8-15ಗಂಟೆಗೆ ಜರುಗಿದೆ.
ತಾಲೂಕಿನ ಅಮಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚಿತ್ರದುರ್ಗ ಕಡೆಯಿಂದ ಕೂಡ್ಲಿಗಿ ಕಡೆಗೆ ಹೊರಟಿದ್ದ ಪಾರ್ಸೆಲ್ ತುಂಬಿರುವ ವಿಆರ್ ಎಲ್ ಕಂಟೆನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೈವೇ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ನಂತರ ವಾಹನದ ತಾಂತ್ರಿಕ ದೋಷದಿಂದ ಏಕಾಏಕಿ ಬೆಂಕಿ ಹತ್ತಿ ಧಗ ಧಗ ಉರಿಯುತ್ತಿದ್ದು ಹೆದ್ದಾರಿ ಸಹಾಯಕರ ಸಹಾಯದಿಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಹೊಸಹಳ್ಳಿ ಪೊಲೀಸರು, ಹೈವೇ ಸಿಬ್ಬಂದಿ ಹಾಗೂ ಪೊಲೀಸ್  ಹೈವೇ  ಪೆಟ್ರೋಲಿಂಗ್ ವಾಹನ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಬೆಂಕಿಯನ್ನು ನಂದಿಸಿ ವಾಹನ ಸಂಚಾರಕ್ಕೆ ಆಡ್ಡಿಯಾಗಿದ್ದ ಪಲ್ಟಿ ಹೊಡೆದಿದ್ದ ಲಾರಿಯನ್ನು ಕ್ರೇನ್ ಸಹಾಯದಿಂದ ರಸ್ತೆಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು. ಲಾರಿಯ ಟಯರ್ ಸೇರಿದಂತೆ ಹೊರಗಿನ ಬಿಡಿಭಾಗಗಳು ಬೆಂಕಿಗೆ ಆಹುತಿಯಾಗಿದ್ದು ಕಂಟೆನರ್ ಲಾರಿಯ ಒಳಗಿರುವ ಪಾರ್ಸೆಲ್ ಸುರಕ್ಷಿತವಾಗಿದ್ದು  ಹಾಗೂ ಲಾರಿಯ ಚಾಲಕನಿಗೆ ಯಾವುದೇ ಗಾಯಗಳಲಾಗದೆ ಅನಾಹುತದಿಂದ ಪಾರಾಗಿದ್ದಾನೆ ಎಂದು ತಿಳಿದಿದೆ.
ತಡವಾಗಿ ಬಂದ ಅಗ್ನಿಶಾಮಕ ವಾಹನ : ಹೈವೇಯಲ್ಲಿ ಲಾರಿಗೆ ಹತ್ತಿದ  ಬೆಂಕಿ ಆರಿಸಲು ಕೂಡ್ಲಿಗಿ ಅಗ್ನಿಶಾಮಕ ಠಾಣೆಗೆ ಮಾಡಿದರೆ ಔಟ್ ಆಫ್ ಸರ್ವಿಸ್ ಅಲ್ಲದೆ ಅಲ್ಲಿರುವ ಎರಡು ವಾಹನದಲ್ಲಿ ಒಂದು ಈಗಾಗಲೇ 15ವರ್ಷಕ್ಕೂ ಅಧಿಕವಾಗಿದ್ದು ಸರ್ಕಾರದ ಆದೇಶದಂತೆ ವಾಹನ ಮೂಲೆ ಸೇರಿದ್ದು ಮತ್ತೊಂದು ವಾಹನ ಕಳೆದೆರಡು ದಿನದಿಂದ ತಾಂತ್ರಿಕ ದೋಷದಿಂದ ನೀರು ಎತ್ತುವ ಸಮಸ್ಯೆ ಇದ್ದು ಅದನ್ನು ಸರಿಪಡಿಸುವಲ್ಲಿ ಬೆಂಗಳೂರು ಕಡೆಯಿಂದ ಬಂದು ಕಳೆದ ರಾತ್ರೀಯಿಂದ ರಿಪೇರಿ ಮಾಡುತ್ತಿದ್ದು ಸರಿಯಾಗಿಲ್ಲದ ಕಾರಣ ಕೊಟ್ಟೂರು ಅಗ್ನಿಶಾಮಕ ವಾಹನ ಸಿಬ್ಬಂದಿ ತಡವಾಗಿ ಬಂದಿದ್ದಾದರೂ ಧಗ ಧಗ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಆರಿಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದಾಗಿದೆ.
ಶಾಸಕರ ಗಮನಕ್ಕೆ : ಕೂಡ್ಲಿಗಿ ಅಗ್ನಿ ಶಾಮಕ ಠಾಣೆಯಲ್ಲಿರುವ ವಾಹನಗಳು ಈಗಾಗಲೇ ಸರ್ಕಾರದ ಆದೇಶದಂತೆ 15ವರ್ಷದ ಹಳೆಯ ವಾಹನಗಳಾಗಿದ್ದು ಇವುಗಳನ್ನು ಗೃಹಸಚಿವರೊಂದಿಗೆ ಚರ್ಚಿಸಿ ರಾಷ್ಟ್ರೀಯ ಹೆದ್ದಾರಿ 50 ಹಾದುಹೋಗಿದ್ದು ವಾಹನಗಳಿಗೆ ಆಕಸ್ಮಿಕ ಬೆಂಕಿ ತಗುಲುವುದು ಮತ್ತು 250ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುವ ಅದೆಷ್ಟೋ ಮನೆಗಳಿಗೆ ಬೆಂಕಿಯಿಂದ ತಪ್ಪಿಸಲು ಕೂಡ್ಲಿಗಿಯಲ್ಲಿರುವ ಅಗ್ನಿ ಶಾಮಕ ವಾಹನಗಳು ಹಳೆಯದಾಗಿರುವ ಪರಿಣಾಮ ತಕ್ಷಣ ಎರಡು ನೂತನ  ಅಗ್ನಿಶಾಮಕ ವಾಹನ ಕರೆತರಲು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿ ಅಗ್ನಿ ಶಾಮಕ ವಾಹನ ಕರೆತರುವಂತೆ ಕೂಡ್ಲಿಗಿ ತಾಲೂಕಿನ ಪ್ರಜ್ಞಾವಂತ ಜನತೆ ಮನವಿ ಮಾಡಿದ್ದಾರೆ.