ಹೈನುಗಾರಿಕೆ ಗ್ರಾಮೀಣ ಜನರ ಜೀವನಾಡಿ

.
ಹೊನ್ನಾacಳಿ,ನ.೨; ಸಹಕಾರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರ ಜನಸ್ನೇಹಿ ಸೇವೆ ಅನನ್ಯ, ಶ್ಲಾಘನೀಯ ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಹನುಮನಹಳ್ಳಿ ಬಿ.ಜಿ. ಬಸವರಾಜಪ್ಪ ಹೇಳಿದರು.
ವಯೋನಿವೃತ್ತಿ ಹೊಂದಿದ ಶಿಮುಲ್ ಉಪ ವ್ಯವಸ್ಥಾಪಕ ಬಿ.ಎಚ್. ರಮೇಶ್ ಮತ್ತು ದಾಸ್ತಾನು ಮೇಲ್ವಿಚಾರಕ ಡಿ. ರಂಗಪ್ಪ ಅವರಿಗೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಹಾಲು ಶೀತಲೀಕರಣ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹೈನುಗಾರಿಕೆ ಗ್ರಾಮೀಣ ಜನರ ಜೀವನಾಡಿಯಾಗಿದೆ. ಅಂಥ ಉಪ ಕಸುಬಿಗೆ ಪ್ರೇರಣೆ ನೀಡುವ ಮಹತ್ವದ ಕೆಲಸವನ್ನು ಶಿಮುಲ್ ಮಾಡುತ್ತಿದ್ದು, ಇದರ ಭಾಗವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಒಕ್ಕೂಟದ ಉದ್ಯೋಗಿಗಳ ಅರ್ಪಣಾ ಮನೋಭಾವದ ಸೇವೆ ಪ್ರಶಂಸನೀಯ ಎಂದು ಬಣ್ಣಿಸಿದರು.ಈ ಹಿಂದೆ ಇದ್ದ ಹಾಲು ಸಂಗ್ರಹ, ಸಾಗಾಟ ಹಾಗೂ ಮಾರುಕಟ್ಟೆ ವ್ಯವಸ್ಥೆಗೂ ಈಗ ಇರುವ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸ ಇದೆ. ಈ ಹಿಂದೆ ಇದ್ದ ಸೀಮಿತ ಹಾಲು ಸಂಗ್ರಹಣಾ ಕೇಂದ್ರಗಳಿಗೆ ಗ್ರಾಮೀಣ ಪ್ರದೇಶಗಳಿಂದ ಹಾಲು ಸಾಗಾಟ ಮಾಡಲು ಹೆಚ್ಚಿನ ಶ್ರಮ ವಹಿಸಬೇಕಾಗಿತ್ತು. ಹಾಲು ಹಾಳಾಗದಂತೆ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕಾಗಿತ್ತು. ಈ ನಡುವೆಯೇ ಹಾಲಿನ ಗುಣಮಟ್ಟದ ಬಗ್ಗೆಯೂ ನಿಗಾ ವಹಿಸಬೇಕಿತ್ತು. ಈ ಎಲ್ಲಾ ಸವಾಲುಗಳ ಮಧ್ಯೆಯೂ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಇಂದು ನಿವೃತ್ತಿಹೊಂದುತ್ತಿರುವವರ ಸೇವೆ ನಿಜಕ್ಕೂ ಸ್ಮರಣಾರ್ಹ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಮಾತನಾಡಿ, ಬಿ.ಎಚ್. ರಮೇಶ್ ಮತ್ತು ಡಿ. ರಂಗಪ್ಪ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ರೀತಿ ಮಾದರಿಯಾಗಿತ್ತು. ಮುಂದೆಯೂ ಅವರ ಮಾರ್ಗದರ್ಶನ ಒಕ್ಕೂಟಕ್ಕೆ ಲಭಿಸುವಂತಾಗಲಿ ಎಂದು ಆಶಿಸಿದರು.
ಶಿಮುಲ್ ನಿರ್ದೇಶಕ ಜಗದೀಶಪ್ಪ ಬಣಕಾರ್ ಮಾತನಾಡಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಸೂಕ್ತ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಇವರೀರ್ವರ ಸೇವೆ ನಿದರ್ಶನ ಎಂದು ಹೇಳಿದರು.
ವಯೋನಿವೃತ್ತಿ ಹೊಂದಿದ ಶಿಮುಲ್ ಉಪ ವ್ಯವಸ್ಥಾಪಕ ಬಿ.ಎಚ್. ರಮೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಗುಜರಾತ್‌ನ ಅಮುಲ್ ಮಾದರಿಯಲ್ಲಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಕೆಎಂಎಫ್ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಾರಂಭದಲ್ಲಿ ಗೊಲ್ಲರಹಳ್ಳಿ ಹಾಲು ಶೀತಲೀಕರಣ ಕೇಂದ್ರದಲ್ಲಿ ಪ್ರತಿ ದಿನ ೧೮೦೦ ಲೀಟರ್‌ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಇದೀಗ, ಪ್ರತಿ ದಿನ ೪೦ ಸಾವಿರ ಲೀಟರ್‌ಗಳಷ್ಟು ಹಾಲು ಸಂಗ್ರಹವಾಗುತ್ತಿದೆ. ಈ ಅಗಾಧ ಪ್ರಗತಿಗೆ ರೈತರೇ ಕಾರಣ ಎಂದು ತಿಳಿಸಿದರು.
ವಯೋನಿವೃತ್ತಿ ಹೊಂದಿದ ಗೊಲ್ಲರಹಳ್ಳಿ ಹಾಲು ಶೀತಲೀಕರಣ ಕೇಂದ್ರದ ದಾಸ್ತಾನು ಮೇಲ್ವಿಚಾರಕ ಡಿ. ರಂಗಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಶಿಮುಲ್‌ನ ಅಧಿಕಾರಿ ವರ್ಗ-ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಶಿಮುಲ್ ಉಪ ವ್ಯವಸ್ಥಾಪಕ ಡಾ.ಎಂ. ತಿಪ್ಪೇಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಭೋಜರಾಜ್, ಕತ್ತಿಗೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಫಾಲಾಕ್ಷಪ್ಪ, ಎನ್. ನಾಗಪ್ಪ, ನ್ಯಾಮತಿ ನಾಗರಾಜ್, ಕಾರಿಗನೂರು ಸಂಘದ ಕಾರ್ಯದರ್ಶಿ ಸಂಜೀವ್‌ಕುಮಾರ್ ಮತ್ತಿತರರು ಮಾತನಾಡಿದರು.
ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಜಯಣ್ಣ, ಶಿಮುಲ್ ವ್ಯವಸ್ಥಾಪಕ ಮಲ್ಲಿಕಾರ್ಜುನ್, ವಿಸ್ತರಣಾಧಿಕಾರಿಗಳಾದ ಶ್ವೇತಾ, ಮಲ್ಲಿಕಾರ್ಜುನ್ ಪೂಜಾರಿ, ರಾಮು ಮತ್ತಿತರರು ಉಪಸ್ಥಿತರಿದ್ದರು.