ಹೈನುಗಾರಿಕೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲು ತೇಲ್ಕೂರ ನಿರ್ದೇಶನ

ಕಲಬುರಗಿ:ಜೂ.10: ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿ ಗೆ ಪೂರಕವಾಗಿ ಸಮಗ್ರ ಯೋಜನೆ ರೂಪಿಸಲು ಮುಂದಾಗುವಂತೆ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ ನ ಅಧ್ಯಕ್ಷ ರಾಗಿರುವ ಶಾಸಕ ರಾಜಕುಮಾರ ತೇಲ್ಕೂರ ನಿರ್ದೇಶನ ನೀಡಿದರು.

ಡಿಸಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಕೃಷಿ, ತೋಟಗಾರಿಕೆ, ಕಲಬುರಗಿ, ಬೀದರ್, ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟ, ಸಹಕಾರಿ, ಪಶು ಸಂಗೋಪನಾ ಇಲಾಖಾಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಸಮಗ್ರವಾದ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಪಡಿಸಿ ಹಾಲಿನ ಉತ್ಪಾದನೆ ದ್ವಿಗುಣಗೊಳಿಸಬೇಕಿದೆ. ಬಹು ಮುಖ್ಯವಾಗಿ ಅರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ. ಹೈನುಗಾರಿಕೆ ಹೆಚ್ಚಿಸಲು ಡಿಸಿಸಿ ಬ್ಯಾಂಕ್ ನಿಂದ ಸಾಲ ಕೊಡಿಸಲಾಗುವುದು.‌ ಸಾಲ ನೀಡಿದರಷ್ಟೇ ಸಾಲದು. ಹೈನುಗಾರಿಕೆ ಹೆಚ್ಚಳದ ಪೂರಕವಾಗಿ ಹಾಲು ಉತ್ಪಾದಕರ ಒಕ್ಕೂಟ, ಹಾಲು ಉತ್ಪಾದಕರ ಸಂಘ ರಚನೆ ಜತೆಗೆ ಹೈನುಗಾರಿಕೆ ಅಳವಡಿಸಲು ಪೂರಕ ಸಹಾಯ ಕಲ್ಪಿಸುವುದು ಬಹು ಮುಖ್ಯವಾಗಿದೆ. ಡಿಸಿಸಿ ಬ್ಯಾಂಕ್ ಜತೆ ಕೈ ಜೋಡಿಸಿದಲ್ಲಿ ಬೇರೆ ಕಡೆಯಿಂದ ಹಾಲು ತರಿಸಿಕೊಳ್ಳದೇ ಸ್ವತಂತ್ರತೆ ಕಂಡುಕೊಳ್ಳಬಹುದಾಗಿದೆಯಲ್ಲದೇ ಹಾಲಿನ ಕ್ರಾಂತಿ ಮಾಡಬಹುದಾಗಿದೆ ಎಂದರು.

ಹೈನುಗಾರಿಕೆ ಅಭಿವೃದ್ಧಿ ಗೆ ಪೂರಕವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಕಾರ್ಯಕ್ರಮ ರೂಪಿಸಬೇಕು. ಸಹಕಾರಿ ಇಲಾಖೆ ಸಂಘಗಳ ರಚನೆಗೆ ಹಾಲು ಉತ್ಪಾದಕರ ಒಕ್ಕೂಟದ ಜತೆಗೆ ಕೈ ಜೋಡಿಸಬೇಕು. ತೋಟಗಾರಿಕೆ ಇಲಾಖೆಯು ತನ್ನ ಬಹಿತೇಕ ಯೋಜನೆಗಳನ್ನು ಹೈನುಗಾರಿಕೆ ಅಭಿವೃದ್ಧಿ ಪೂರಕವಾಗಿದ್ದನ್ನೇ ಅಳವಡಿಸಬೇಕೆಂದರಲ್ಲದೇ ಪಶು ಸಂಗೋಪನಾ ಇಲಾಖೆಯು ಆಕಳು, ಕರು, ಎಮ್ಮೆಗಳಿಗೆ ಸೂಕ್ತ ಕಾಲ- ಕಾಲಕ್ಕೆ ಗರ್ಭಧಾರಣೆಯಂತಹ ಚಿಕಿತ್ಸಾ ಕ್ರಮಗಳನ್ಬು ಕಡ್ಡಾಯವಾಗಿ ಕೈಗೊಳ್ಳಬೇಕು. ಹೀಗೆ ಎಲ್ಲ ಇಲಾಖೆಗಳು ಸಮನ್ವಯ ಯೆ ಸಾಧಿಸಿ ಕೈ ಜೋಡಿಸಿದಲ್ಲಿ ಬಿಸಿಲು ನಾಡಲ್ಲಿ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಬಹುದಾಗಿದೆ ಎಂದು ತೇಲ್ಕೂರ ಹೇಳಿದರು.

ಆಯಾ ಇಲಾಖಾಧಿಕಾರಿಗಳು ಹೈನುಗಾರಿಕೆ ಅಭಿವೃದ್ಧಿ ಗೆ ಪೂರಕವಾಗಿ ಯಾವ ಯಾವ ಕಾರ್ಯಗಳನ್ನು ಕೈಗೊಳ್ಳಬಹುದೆಂಬುದನ್ನು ಡಿಸಿಸಿ ಬ್ಯಾಂಕ್ ಗೆ ಸಲ್ಲಿಸಬೇಕೆಂದರು.

ಈ ಹಿಂದೆ ಹೈನುಗಾರಿಕೆ ಅಭಿವೃದ್ಧಿ ಗೆ ಡಿಸಿಸಿ ಬ್ಯಾಂಕ್ ನಿಂದ ಹೈನುಗಾರಿಕೆಗೆ ಸಾಲ ನೀಡಲಾಗಿದೆ. ಆದರೆ ಅದು ಕಾರ್ಯಕ್ಕೆ ಬಳಕೆಯಾಗಿಲ್ಲ. ಆದರೆ ಈ ಸಾಲ ನೀಡಿ ಹೈನುಗಾರಿಕೆ ತೊಡಗಿಸುವ ವಾತಾವರಣ ಸೃಷ್ಟಿಸಲಾಗುವುದು. ಹೈನುಗಾರಿಕೆ ಸಾಲದಲ್ಲಿ ನಯಾಪೈಸೆ ಬೇರೆ ಕಡೆ ವಾಲದಂತೆ ನಿಗಾ ವಹಿಸಲಾಗುವುದು. ಸಾಲ ವಿತರಣೆ ಹಾಗೂ ವಸೂಲಾತಿಯಲ್ಲೂ ಈ ಹಿಂದಿನ ಕ್ರಮ ಅನುಸರಿಸಲಾಗದು. ಹೊಸತನ ಅಳವಡಿಸಲಾಗುವುದು. ಹೈನುಗಾರಿಕೆ ಜತೆಗೇ ಇತರ ಕೃಷಿ ಕಾಯಕದ ಆಸಕ್ತಿ ಹೆಚ್ಚಿಸಲಾಗುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು.

ಕಲಬುರಗಿ, ಬೀದರ್- ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಾತನಾಡಿ, ಉತ್ಪಾದಕರ ಸಂಘಗಳು ರಚನೆಗೆ ಹಾಗೂ ಸರಾಗವಾಗಿ ಹಾಲು ಸಾಗಾಣಿಕೆ ಒಕ್ಕೂಟ ಸದಾ ಬದ್ದವಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ತೇಲ್ಕೂರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಹಾಗೂ ಇಫ್ಕೋ ಅಧಿಕಾರಿಗಳೊಂದಿಗೆ ರಸಗೊಬ್ಬರ ಕುರಿತಾಗಿ ಮಾಹಿತಿ ಪಡೆದುಕೊಂಡರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೆಶಕ ಚಿದಾನಂದ ನಿಂಬಾಳ, ಜಂಟಿ ಕೃಷಿ ನಿರ್ದೇಶಕ ರವೀಂದ್ರನಾಥ ಸೂಗುರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಹಿರೇಮಠ,
ಪಶು ಸಂಗೋಪನಾ ಇಲಾಖೆಯ ಪಶು ಸಂಗೋಪನಾ ಇಲಾಖೆಯ ಹಿರೇಮಠ ಸೇರಿದಂತೆ ಮುಂತಾದವರಿದ್ದರು.


ಹೈನುಗಾರಿಕೆ ಅಭಿವೃದ್ಧಿ ಯಾದರೆ ಆರ್ಥಿಕ ಸ್ವಾವಲಂಬನೆ ಜತೆಗೇ ಆರೋಗ್ಯ ವೃದ್ಧಿ ಹಾಗೂ ಶಿಕ್ಷಣವಂತರಾಗಲು ಉತ್ತೇಜನ ದೊರಕುತ್ತದೆ.

  • ರಾಜಕುಮಾರ ಪಾಟೀಲ್ ತೇಲ್ಕೂರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ