ಹೈನುಗಾರಿಕೆಯಲ್ಲಿ ಉತ್ತಮ ಪ್ರಗತಿ: ಮಹಲಿಂಗಯ್ಯ

ಕೊರಟಗೆರೆ, ಸೆ. ೩- ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಿನಕ್ಕೆ ಸರಾಸರಿ ೮.೩೦ ಲಕ್ಷ ಹಾಲು ಉತ್ಪಾದನೆ ಮಾಡುತ್ತಿದ್ದು, ತಿಂಗಳಿಗೆ ೮೪ ಕೋಟಿ ಹಣವನ್ನು ಉತ್ಪಾದಕರ ಖಾತೆಗಳಿಗೆ ಜಮಾ ಮಾಡಿ ಹೈನುಗಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಅಧ್ಯಕ್ಷ ಮಹಲಿಂಗಯ್ಯ ತಿಳಿಸಿದರು.
ಪಟ್ಟಣದ ಸುವರ್ಣಮುಖಿ ಲಕ್ಷೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಲು ಉತ್ಪಾದಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಪ್ರಾದೇಶಿಕಾ ಸಭೆಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೧೮ ತುಮುಲ್‌ಗೆ ನಾವುಗಳು ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ೬.೨೦ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ೨೦೧೯ ರಲ್ಲಿ ೮ ಲಕ್ಷ ಲೀಟರ್ ಉತ್ಪಾದನೆಯತ್ತ ಸಾಗಿದಾಗ ಕೊರೊನಾದಿಂದ ದಿನಕ್ಕೆ ೩.೭೫ ಲಕ್ಷ ಹಾಲು ಉಳಿದು ಸಂಕಷ್ಟ ಸ್ಥಿತಿಗೆ ಬಂದರೂ ಉತ್ಪಾದಕರ ಬೆಂಬಲಕ್ಕೆ ತುಮುಲ್ ನಿಂತಿತು. ಈಗ ಸಂಘದಿಂದ ದಿನಕ್ಕೆ ಬೆಂಗಳೂರಿಗೆ ೧,೬೬ ಲಕ್ಷ, ತುಮಕೂರಿಗೆ ೧.೨೬ ಲಕ್ಷ, ಮುಂಬೈಗೆ ೨ ಲಕ್ಷ, ಜಮ್ಮು ಕಾಶ್ಮೀರಕ್ಕೆ ೨೬ ಸಾವಿರ, ಆಂಧ್ರ ಪ್ರದೇಶಕ್ಕೆ ೩೦ ಸಾವಿರ ಲೀಟರ್ ಹಾಲು ದಿನಕ್ಕೆ ಸರಬರಾಜು ಮಾಡುತ್ತಿದ್ದೇವೆ ಎಂದರು.
ತುಮುಲ್‌ಗೆ ಈಗ ಸುಮಾರು ೯.೩೩ ಲಕ್ಷ ಲೀಟರ್ ಹಾಲು ಬರುತ್ತಿದ್ದು, ಅದು ಉಪಯೋಗಕ್ಕಿಂತ ಹೆಚ್ಚಾಗುತ್ತಿದೆ. ಅದಕ್ಕಾಗಿ ಸುಮಾರು ೧೫ ಲಕ್ಷ ಸಾಮರ್ಥ್ಯದ ೧೫೪ ಕೋಟಿ ರೂ.ಗಳ ಸಂಸ್ಕರಣಾ ಮತ್ತು ಶೇಖರಣ ಘಟಕವನ್ನು ಪ್ರಾರಂಭಿಸುತ್ತಿದ್ದೇವೆ. ಪ್ರಸ್ತುತ ೮೬ ಸಾವಿರ ಕುಟುಂಬಗಳು ಹಾಲು ಉತ್ಪಾದನೆ ಮಾಡುತ್ತಿವೆ. ಆ ಕುಟುಂಬದವರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಹಂತಗಳ ತಕ್ಕಂತೆ ೨೫ ಸಾವಿರ, ೧೦ ಸಾವಿರ ಪ್ರೋತ್ಸಾಹಧನವನ್ನು ಜಿಲ್ಲೆಯಲ್ಲಿ ೨೨೧ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್, ಎಸ್.ಎಸ್.ಎಲ್,ಸಿ, ಪಿ,ಯು.ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ರಾಸುಗಳಿಗೆ ವಿಮೆ, ಮೃತಪಟ್ಟ ಹಾಲು ಉತ್ಪಾದಕರ ಕುಟುಂಬದವರಿಗೆ ಪರಿಹಾರ ಸೇರಿದಂತೆ ಹಲವು ಸವಲತ್ತಗಳನ್ನು ನೀಡುತ್ತಿದ್ದು, ಸಹಕಾರ ನಿಯಮಿತದ ಏಳ್ಗೆಗೆ ಮತ್ತು ಉತ್ಪಾದಕರ ಶ್ರೇಯೋಭಿವೃಧಿಗೆ ಪ್ರಾಮಾಣಿಕವಾಗಿ ದುಡಿಯತ್ತಿದ್ದೇವೆ ಎಂದರು.
ತಾಲ್ಲೂಕು ನಿರ್ದೇಶಕ ಈಶ್ವರಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ದಿನಕ್ಕೆ ೭೧೧೧೭ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ೨೫೧೯೫ ಸದಸ್ಯರನ್ನು ಹೊಂದಿದೆ. ಇಂದಿನ ಕಾರ್ಯಕ್ರಮದಲ್ಲಿ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆ ಕರೆದಿದ್ದು, ಕುಂದು ಕೊರತೆಗಳನ್ನು ಚರ್ಚಿಸಲಾಗಿದೆ. ನಮ್ಮ ತಾಲ್ಲೂಕಿನ ಹಾಲು ಉತ್ಪಾದಕರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ೧೫೫ ಪ್ರತಿಭಾನ್ವಿತ ಮಕ್ಕಳಿಗೆ ೩.೧೦ ಲಕ್ಷ ಪ್ರೋತ್ಸಾಹಧನ, ಮರಣ ಹೊಂದಿದ ರಾಸುಗಳಿಗೆ ೭ ಲಕ್ಷ ಮತ್ತು ಉತ್ಪಾದಕರಿಗೆ ೧.೫೦ ಲಕ್ಷ ವಿಮಾ ಹಣವನ್ನು ನೀಡುತ್ತಿದ್ದು, ಉತ್ಪಾದಕರ ಪ್ರೋತ್ಸಾಹಕ್ಕೆ ಸದಾ ಬದ್ದ ಎಂದರು. ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಮಾತನಾಡಿ, ಹೈನುಗಾರಿಕೆ ಅವಲಂಬಿತ ರೈತ ಸಂಕಷ್ಟಕ್ಕೆ ಸಿಲುಕಿರುವುದು ಅತಿ ವಿರಳ, ಹಾಲು ಉತ್ಪಾದನೆ ಗ್ರಾಮೀಣ ರೈತ ಜೀವನ ಮಟ್ಟವನ್ನು ಸುಧಾರಿಸಿದ್ದು, ಹಾಲು ನೀಡುವ ರಾಸುಗಳಿಗೆ ಖನಿಜಾಂಶದ ಆಹಾರ, ಉತ್ತಮ ಹಸಿ ಮತ್ತು ಒಣ ಮೇವು, ಆರೋಗ್ಯ ಕಾಳಜಿ ವಹಿಸಿದರೆ ಉತ್ತಮ ಹಾಲನ್ನು ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಪ್ರಸಾದ್, ಚಂದ್ರಪ್ಪ, ಡಾ. ರಾಜು, ರಂಜಿತ್, ವನಜಾಕ್ಷಿ, ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.