ಹೈನುಗಾರಿಕೆಯನ್ನು ಜನಪ್ರಿಯಗೊಳಿಸಬೇಕು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.08: ಹೆಚ್ಚು ಜನರಿಗೆ ಉದ್ಯೋಗ ನೀಡುವ ಲಕ್ಷಾಂತರ ಕುಟುಂಬಗಳ ಹೈನೋದ್ಯಮವನ್ನು ಅಭಿವೃದ್ದಿಗೊಳಿಸುವ ಮೂಲಕ ಹೈನುಗಾರಿಕೆಯನ್ನು ಜನಪ್ರಿಯಗೊಳಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಮಿಶ್ರತಳಿ ಹೆಣ್ಣುಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಅತಿಹೆಚ್ಚು ಹಾಲು ಉತ್ಪಾದಿಸುವ ಗ್ರಾಮಗಳಲ್ಲಿ ಐಕನಹಳ್ಳಿ ಕೂಡ ಒಂದಾಗಿದ್ದು ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ಹೈನೋದ್ಯಮದಲ್ಲಿ ಹಸುಗಳ ಸಂತತಿ ಅಭಿವೃದ್ದಿಪಡಿಸುವುದು ಮುಖ್ಯವಾಗಿದ್ದು ಹಸು ಗರ್ಭಾವಸ್ಥೆಯಲ್ಲಿ ಇದ್ದಾಗಲೇ ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ಕರು ಹಾಕಿದ ನಂತರ ಕೇವಲ ಹಾಲನ್ನು ಡೈರಿಗೆ ಹಾಕುವುದು ಮುಖ್ಯವಲ್ಲ ಜನಿಸಿದ ಹೆಣ್ಣು ಕರುಗಳನ್ನು ದಷ್ಟಪುಷ್ಟವಾಗಿ ಬೆಳೆಸಿ ಒಂದು ವರ್ಷಕ್ಕೆ ಗರ್ಭಾವಸ್ಥೆಗೆ ಬರುವಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಕರು ಜನಿಸಿದ ದಿನದಿಂದ ಅದಕ್ಕೆ ಹೆಚ್ಚಿನ ಪ್ರಮಾಣದ ಹಾಲನ್ನು ನೀಡಬೇಕು. ನಂತರದ ದಿನಗಳಲ್ಲಿ ಅದಕ್ಕೆ ತಿಂಡಿ, ಮೇವು ಮುಂತಾದುವುಗಳನ್ನು ಒದಗಿಸಿ ಪೆÇೀಷಣೆ ಮಾಡಿದಾಗ ಉತ್ತಮ ಆರೋಗ್ಯವಂತ ಹಸುಗಳು ಅರೋಗ್ಯವಂತ ಕರುಗಳಿಗೆ ಜನ್ಮ ನೀಡುತ್ತವೆ. ಇಲ್ಲಿ ಬಂದಿರುವ ಎಲ್ಲಾ ಕರುಗಳು ಬಹಳ ಚೆನ್ನಾಗಿದ್ದು ಇವುಗಳ ಪೈಕಿ ಅತ್ಯುತ್ತಮವಾದುವುಗಳನ್ನು ವೈದ್ಯರುಗಳ ತಂಡ ಆಯ್ಕೆ ಮಾಡಿ ಬಹುಮಾನ ನೀಡುತ್ತಾರೆ. ಅಲ್ಲದೇ ಭಾಗವಹಿಸಿರುವ ಎಲ್ಲಾ ಕರುಗಳ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಹೈನೋದ್ಯಮವನ್ನು ನೀವು ಎಷ್ಟು ಪ್ರೀತಿಪಟ್ಟು ಮಾಡುತ್ತೀರೋ ಅಷ್ಟೇ ಪ್ರಮಾಣದಲ್ಲಿ ಹೈನುಗಾರಿಕೆ ನಿಮ್ಮನ್ನು ಕೈ ಹಿಡಿಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಆಯ್ಕೆ ಸಮಿತಿ ವೈದ್ಯರುಗಳಾದ ಡಾ.ಕೃಷ್ಣಮೂರ್ತಿ, ಡಾ,ರವಿಕುಮಾರ್, ಡಾ.ಸಂಜು, ಸುಧಾ, ಡೈರಿ ಅಧ್ಯಕ್ಷ ಪುಟ್ಟೇಗೌಡ, ಗ್ರಾಪಂ ಸದಸ್ಯರಾದ ಕುಮಾರಣ್ಣ, ಶಂಕರೇಗೌಡ, ಸೇರಿದಂತೆ ಹಲವರಿದ್ದರು.