ಹೈದ್ರಾಬಾದ್ ಕರ್ನಾಟಕ : ೩೯ ವಿಧಾನಸಭಾ ಕ್ಷೇತ್ರಗಳಿಗೆ

ಅನ್ನದಾಸೋಹ ಕೇಂದ್ರ ವಿಸ್ತರಣೆ – ಕೆ.ಶಿವನಗೌಡ ನಾಯಕ
ದೇವದುರ್ಗ.ಮೇ.೩೧- ಕೋವಿಡ್ ಎರಡನೇ ಅಲೆ ತೀವ್ರತೆ ಹಿನ್ನೆಲೆಯಲ್ಲಿ ಜನ ಸಂಕಷ್ಟ ಸ್ಥಿತಿಯಲ್ಲಿದ್ದು ಅವರ ನೆರವಿಗೆ ಮುಂದಾಗಿ ಹಸಿದ ಹೊಟ್ಟೆ ತುಂಬುವ ಕಾರ್ಯಕ್ರಮ ಇಂದಿನಿಂದ ಚಾಲನೆ ಪಡೆದಿದ್ದು, ಮುಂದಿನ ದಿನಗಳಲ್ಲಿ ಹೈದರಾಬಾದ್ ಕರ್ನಾಟಕ ೩೯ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಒಂದು ತಿಂಗಳ ಕಾಲ ವಿಸ್ತರಣೆಯಾಗಲಿದೆಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಅವರು ತಮ್ಮ ನೂತನ ನಿವಾಸದ ಆವರಣದಲ್ಲಿ ಅನ್ನದಾಸೋಹ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ತಾಲೂಕಿನ ೩೩ ಗ್ರಾಮ ಪಂಚಾಯಿತಿಗಳಿಗೆ ಪ್ರತಿ ನಿತ್ಯ ೪೦ ಸಾವಿರ ಜನರಿಗೆ ಆಹಾರ ತಲುಪಿಸಲಾಯಿತು. ಕಳೆದ ಮೇ ೧೪ ರಿಂದ ಪಟ್ಟಣದ ೨೩ ವಾರ್ಡಗಳಲ್ಲಿ ಆಹಾರ ಕಿಟ್ಟುಗಳನ್ನು ವಿತರಣೆ ಮಾಡಲಾಗುತ್ತದೆ. ಇದರೊಂದಿಗೆ ಸರ್ಕಾರಿ ಸೇರಿ ೪೩ ಖಾಸಗಿ ಆಸ್ಪತ್ರೆ ರೋಗಿಗಳಿಗೆ ಬೆಳಿಗ್ಗೆ, ಮಧ್ಯಾಹ್ನ, ಉಪಹಾರ, ಪೌಷ್ಟಿಕ ಮೊಟ್ಟೆ ನೀಡಲಾಗುತ್ತದೆ.
ಇದೀಗ ತಾಲೂಕಿನ ೩೩ ಗ್ರಾಮ ಪಂಚಾಯಿತಿಗಳಲ್ಲಿ ಇದೇ ಮಾದರಿಯಲ್ಲಿ ನಿತ್ಯ ೪೦ ಸಾವಿರ ಪೌಷ್ಟಿಕ ಆಹಾರ ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಎಲ್ಲೆಡೆ ಕೊರೊನಾ ಅಬ್ಬರದಿಂದ ಜನ ತೀವ್ರ ಸಂಕಷ್ಟದಲ್ಲಿದ್ದು, ಹಸಿದ ಹೊಟ್ಟೆಗೆ ಆಸರೆಯಾಗುವ ದೃಷ್ಟಿಯಿಂದ ಅನ್ನದಾಸೋಹ ವಿತರಣೆ ಕಾರ್ಯಕ್ರಮ ಹೈದ್ರಾಬಾದ್ ಕರ್ನಾಟಕ ವಿಭಾಗಕ್ಕೆ ವಿಸ್ತರಣೆ ಮಾಡಲಾಗುತ್ತದೆ. ಈ ಕಾರ್ಯವನ್ನು ಮೆಚ್ಚಿ ರಾಜ್ಯದ ಇತರೆ ಜನಪ್ರತಿನಿಧಿಗಳು ಅನ್ನದಾಸೋಹ ಕಾರ್ಯಕ್ರಮಗಳಿಗೆ ಮುಂದಾಗುವ ಸಾಧ್ಯತೆ ಇರುವುದರಿಂದ ಹಸಿದ ಹೊಟ್ಟೆಗಳು ತುಂಬಲಿವೆ.
ನನ್ನ ಬಾಲ್ಯದ ಜೀವನದಲ್ಲಿ ನಮ್ಮ ತಂದೆಯವರು ಅನ್ನ ದಾಸೋಹ ಕಾರ್ಯಕ್ರಮ ಮಾಡುವುದನ್ನು ಕಂಡು ತಂದೆಯ ಮಾದರಿಯಲ್ಲಿ ನಡೆಯುವುದು ನಮ್ಮ ತಾಯಿ ಮಹಾದೇವಮ್ಮ ಇಚ್ಛೆಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಅನ್ನದಾಸೋಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಕಷ್ಟ ಕಾಲದಲ್ಲಿ ಜನರಿಗೆ ನೆರವು ನೀಡುವುದೇ ಅತ್ಯಂತ ಮಾನವೀಯ ಕಾರ್ಯವಾಗಿದೆ. ತಾಲೂಕಿನ ಜನ ನಮ್ಮೊಂದಿಗೆ ಗುರುತಿಸಿಕೊಂಡಿದ್ದರು. ಇವರ ಸಂಕಷ್ಟದಲ್ಲಿ ಅವರ ಹಸಿವು ನೀಗಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ನನ್ನ ಗುರಿಯಾಗಿದೆ.
ಆದರೆ, ಕೊರೊನಾ ತಂದ ವಿಪತ್ತು ಜನ ಸಂಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಡೀ ತಾಲೂಕಿಗೆ ಅನ್ನದಾಸೋಹ ಮಾಡುವ ಕಾರ್ಯ ಹಮ್ಮಿಕೊಳ್ಳಲಾಗಿದೆಂದರು.