ಹೈದ್ರಾಬಾದ್ ಕರ್ನಾಟಕ ಕತೆಗಾರರು, ಸಾಹಿತಿಗಳು ಹಣೆಪಟ್ಟಿ ಅಳಿಸಿಹಾಕಿ: ಡಾ. ಚಿದಾನಂದ್ ವಾಲಿ

ಕಲಬುರಗಿ:ಸೆ.29: ಹೈದ್ರಾಬಾದ್ ಕರ್ನಾಟಕ ಕತೆಗಾರರು ಮತ್ತು ಸಾಹಿತಿಗಳು ಎಂಬ ಮಿತಿಯನ್ನು ಹೇರಲಾಗಿದ್ದು, ಅದನ್ನು ಅಳಿಸಿಹಾಕಬೇಕು ಎಂದು ಡಾ. ಚಿದಾನಂದ್ ವಾಲಿ ಅವರು ಕರೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಶುಕ್ರವಾರ ಬಿಸಿಲ ನಾಡಿನ ಸಣ್ಣ ಕತೆಗಳು ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಕತೆಗಾರರು ಅಂತ ಮಾತ್ರ ಯಾಕೆ ಇದ್ದಾರೆ, ಬೇರೆ ಭಾಗಕ್ಕೆ ಹೀಗೆಕೆ ಇಲ್ಲ? ಹೈದ್ರಾಬಾದ್ ಕರ್ನಾಟಕದ ಕತೆಗಾರರು, ಸಾಹಿತಿಗಳು ಎಂಬ ಹಣೆಪಟ್ಟಿ ಇರುವ ಹಾಗೆ ಕರಾವಳಿ ಕತೆಗಾರರು, ಹಳೆ ಮೈಸೂರು ಕತೆಗಾರರು, ಸಾಹಿತಿಗಳು ಅಂತ ಯಾಕೆ ಇಲ್ಲ ಎಂದರು.
ಇದು ಮುಖ್ಯವಾಗಿ ದಲಿತ ಸಾಹಿತಿಗಳು ಅಂತ ಮಾತ್ರ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು ಇಲ್ಲದಿರುವಂತೆಯೆ ಇದು ಒಂದು ಸಾಹಿತ್ಯ ರಾಜಕೀಯ. ಕರ್ನಾಟಕದ ಒಂದು ಭಾಗವನ್ನು ಹೀಗೆ ಗುರುತಿಸುವ ಮೂಲಕ ಅದಕ್ಕೂ ಒಂದು ಮಿತಿಯನ್ನು ಹೇರಲಾಗುತ್ತದೆ. ಈ ಮಿತಿಯನ್ನು ಅರಿತುಕೊಳ್ಳಬೇಕಿದೆ ಮತ್ತು ಅದನ್ನು ಒಡೆದು ಅಲ್ಲಿಂದ ಮುಂದಕ್ಕೆ ಸಾಗಬೇಕಿದೆ. ಇದು ನನಗೆ ಮತ್ತು ನಮ್ಮೆಲ್ಲರಿಗೆ ಮುಖ್ಯವಾದ ವಿಚಾರವಾಗಿದೆ ಎಂದು ಅವರು ಹೇಳಿದರು.
ಕತೆಗಳಲ್ಲಿ, ವಿವಿಧ ರೀತಿಯ ವರ್ಗೀಕರಣಗಳು ಕೂಡ ಈ ರೀತಿಯ ಕೆಲಸವನ್ನು ಮಾಡುತ್ತಿರುತ್ತವೆ. ಎಡ-ಬಲ; ಎಂಬ ಎರಡು ತುದಿಗಳನ್ನು ಹೆಚ್ಚು ಮಾತನಾಡುವುದು ಕಾಣಿಸುತ್ತದೆ. ಎರಡು ಧ್ರುವಗಳ ನಡುವೆ ಇರುವ ಗಾಳಿ ಬೆಳಕನ್ನ, ಬದುಕನ್ನ ಕುರಿತು ಮಾತಾಡುವುದು ಇಲ್ಲವಾಗಿದೆ. ಹಾಗಾದರೆ, ಎಡ-ಬಲ ಎನ್ನುವುದು ಬಿಟ್ಟು ಮಧ್ಯಮ ಎಂಬುದೊಂದು ಇದೆಯೆ? ಇದನ್ನು ಕುಹಕವಾಡುವುದು ಬೇಡ. ಆಧುನಿಕ ಕಾಲದ ಭಾರತದಲ್ಲಿ ಜಾಗತಿಕವಾದ ಎರಡು ಶಕ್ತಿಗಳನ್ನು ಮೀರಿ ಮೂರನೆಯ ಜಗತ್ತು ಆಗಿ ಭಾರತ ನಿಂತಿರುವುದು ನಮಗೆ ಮಾದರಿಯಾಗಬೇಕಿದೆ ಎಂದು ಅವರು ತಿಳಿಸಿದರು.
ಉದ್ಘಾಟನೆ ನೆರವೇರಿಸಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ಮಾತನಾಡಿ, ಸಾಹಿತ್ಯ ಎನ್ನುವುದು ಒಂದು ಪ್ರದೇಶವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮುಖ್ಯವಾದ ಸಾಧನವಾಗಿದೆ. ಹೈದ್ರಾಬಾದ್ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶವಾಗಿರುವುದರಿಂದ ಈ ಭಾಗದ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಬೇಕಿದೆ ಮತ್ತು ಈ ಅಧ್ಯಯನಗಳು ಸರಕಾರದ ನೀತಿ ನಿಯಮಗಳನ್ನು ಮಾಡುವುದಕ್ಕೆ ಸಹಾಯಕವಾಗುವಂತೆ ಬರಬೇಕಿದೆ ಎಂದು ಒತ್ತಿ ಹೇಳಿದರು.
ವಿಚಾರ ಸಂಕಿರಣದ ಸಂಯೋಜಕರೂ ಆದ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ್ ಕೋಡಗುಂಟಿ ಅವರು ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶವು ಭೂರಚನೆಯ ಕಾಲದಿಂದ ವಿಶಿಷ್ಟ ಶಿಲಾರಚನೆ ಮತ್ತು ಫಲವತ್ತಾದ ಮಣ್ಣನ್ನು ಹೊಂದಿ ಶಿಲಾಯುಗದ ಮಹತ್ವದ ಕೇಂದ್ರವಾಗಿ ಬೆಳೆಯಿತು. ಒಕ್ಕಲುತನ ಮೊದಲಾಗಿ ನಾಗರಿಕತೆ ಬೆಳೆದು ಸಂಕೀರ್ಣತೆ ಹೆಚ್ಚು ಇಲ್ಲಿ ಬೆಳೆದಿದೆ. ಈ ಸಂಕೀರ್ಣ ಪರಿಸರವನ್ನು ಅರಿತುಕೊಳ್ಳುವ ಆಶಯದೊಂದಿಗೆ ಈ ವಿಚಾರ ಸಂಕಿರಣವನ್ನು ಆಯೋಜಿಸಿದೆ ಎಂದರು.
ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರವi ವಿಸಾಜಿ ಅವರು ಉಪಸ್ಥಿತರಿದ್ದರು. ಸಂಗೀತ ವಿಭಾಗದ ಡಾ. ಜಯದೇವಿ ಜಂಗಮಶೆಟ್ಟಿ, ಡಾ. ಸ್ವಪ್ನಿಲ್ ಚಾಪೇಕರ್ ಅವರು ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು, ಕು. ವಿಜಯಲಕ್ಷ್ಮಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.