ಹೈದ್ರಾಬಾದ್‌ನ ಒಂದೆ ಕುಟುಂಬದ ನಾಲ್ವರ ಸಾವು

ಬಾಲಯ್ಯ ಕ್ಯಾಂಪ್ ಬಳಿ ಕಾರು – ಲಾರಿ ಮಧ್ಯೆ ಭೀಕರ ಅಪಘಾತ
ಸಿಂಧನೂರು.ಜು.೧೮- ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೈದ್ರಾಬಾದ್ ಮೂಲದ ಒಂದೆ ಕಟುಂಬದ ಪತಿ, ಪತ್ನಿ ಹಾಗೂ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಜವಳಗೇರಾ ಹತ್ತಿರದ ಬಾಲಯ್ಯ ಕ್ಯಾಂಪ್ ಬಳಿ ಸಂಭವಿಸಿದೆ.
ಮುಂಜಾನೆ ೬ ಘಂಟೆಗೆ ಈ ಭೀಕರ ರಸ್ತೆ ಅಪಘಾತ ಘಟಿಸಿತು. ಭೀಕರ ಅಪಘಾತದ ಹೊಡೆತಕ್ಕೆ ಕೆಂಪು ಬಣ್ಣದ ಆಲ್ಟೋ ಕಾರು ಲಾರಿಯ ಒಳಗೆ ಸೇರಿಕೊಂಡಿತ್ತು. ಪೊಲೀಸರು ಜೆಸಿಬಿ ಮೂಲಕ ಲಾರಿಯನ್ನು ಹೊರ ತೆಗೆದು ಶವಗಳನ್ನು ಆಸ್ಪತ್ರೆಗೆ ಸಾಗಿಸಿದರು. ಕೆಂಪು ಬಣ್ಣದ ಟಿ.ಎಸ್.೦೮ ಹೆಚ್.ಜಿ.೫೫೮೪ ಆಲ್ಟೋ ಕಾರು ಬೆಂಗಳೂರಿನಿಂದ ಹೈದ್ರಾಬಾದ್‌ನತ್ತ ಸಾಗಿತ್ತು. ಬೆಳಗಿನ ಜಾವ ೬ ಘಂಟೆಗೆ ಬಾಲಯ್ಯ ಕ್ಯಾಂಪ್ ಬಳಿ ಎದುರುಗಡೆಯಿಂದ ಬಂದ ಎ.ಪಿ.೨೧ – ೬೪೯೮ ಲಾರಿ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿದೆ.
ಮೃತರನ್ನು ಪ್ರದೀಪ್ ಸಕ್ಸೇನಾ (೩೫), ಪೂರ್ಣಿಮಾ ಸಕ್ಸೇನಾ (೩೦), ಜತೀನ್ ಸಕ್ಸೇನಾ (೧೨), ಮಾಹಿನ್ ಸಕ್ಸೇನಾ (೭) ಎಂದು ಗುರುತಿಸಲಾಗಿದೆ. ಲಾರಿಯ ಕೆಳಗೆ ಸಿಕ್ಕಿಕೊಂಡಿದ್ದ ಲಾರಿನಿಂದ ಶವಗಳನ್ನು ತೆಗೆಯಲು ಹರಸಾಹಸ ಮಾಡಬೇಕಾಯಿತು. ಜೆಸಿಬಿ ನೆರವಿನೊಂದಿಗೆ ಕಾರನ್ನು ಹೊರ ತೆಗೆದು ಎಲ್ಲಾ ಮೃತ ದೇಹಗಳನ್ನು ಸಿಂಧನೂರು ಆಸ್ಪತ್ರೆಗೆ ಸಾಗಿಸಲಾಯಿತು. ಅಪಘಾತ ಸಂಭವಿಸುತ್ತಿದ್ದಂತೆ ಲಾರಿಯ ಚಾಲಕ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.