ಹೈದರಾಬಾದ್ : ನಾಳೆಯಿಂದ ಎರಡು ದಿನ ರಾಷ್ಟ್ರೀಯ ಗಣಿ ಸಚಿವರ ಸಮಾವೇಶ

ಬೆಂಗಳೂರು,ಸೆ.8- ದೇಶದ ಗಣಿ ಕ್ಷೇತ್ರದ ಸುಧಾರಣೆಯತ್ತ ಚಿಂತನೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಗಣಿ ಸಚಿವಾಲಯ, ನಾಳೆ ಮತ್ತು ಮಾಡಿದ್ದು ಎರಡು ದಿನಗಳ ಕಾಲ ಹೈದರಾಬಾದ್‌ನಲ್ಲಿ “ರಾಷ್ಟ್ರೀಯ ಗಣಿ ಸಚಿವರ ಸಮಾವೇಶ ಆಯೋಜಿಸಲಾಗಿದೆ.

ರಾಜ್ಯದಿಂದ ಗಣಿ ಸಚಿವ ಹಾಚಾರ್ ಹಾಲಪ್ಪ ಬಸಪ್ಪ ಭಾಗವಹಿಸಲಿದ್ದಾರೆ.ದೇಶದ ಗಣಿಗಾರಿಕೆ ಕ್ಷೇತ್ರದ ಸವಾಲು ಹಾಗೂ ಸಾಮರ್ಥ್ಯ ಅರಿಯಲು ನಿರಂತರ ಪ್ರಯತ್ನದ ಭಾಗವಾಗಿ ಈ ಸಮಾವೇಶ ಆಯೋಜಿಸಲಾಗಿದೆ.

ಮುಂದಿನ 25 ವರ್ಷಗಳಲ್ಲಿ ಖನಿಜಗಳ ಜಾಗತಿಕ ಬೇಡಿಕೆ ಉತ್ಪಾದನೆ ಮೀರಿಸಲಿದೆ. ಹಾಗಾಗಿ ಈ ಕ್ಷೇತ್ರದ ಸುಧಾರಣೆಯತ್ತ ಗಮನ ಹರಿಸುವುದು ಸದ್ಯದ ಅನಿವಾರ್ಯತೆಯಾಗಿದ್ದು ಎರಡು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ಗಣಿಗಾರಿಕೆ ಕುರಿತಾದ ಸೆಷನ್ ಗಳು ನಡೆಯಲಿದೆ ಎಂದು ಸಚಿವ ಆಚಾರ್‌ ಹಾಲಪ್ಪ ತಿಳಿಸಿದ್ದಾರೆ.

ರಾಜ್ಯದ ಗಣಿ ಇಲಾಖೆ ಮತ್ತು ರಾಜ್ಯದ ಗಣಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಸಚಿವರು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ರಾಜ್ಯ ಗಣಿ ಇಲಾಖೆಯ ನಿರ್ದೇಶಕ ಡಿ ಎಸ್ ರಮೇಶ್ ಅವರು ಸಚಿವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗಣಿ ಸಚಿವಾಲಯ ಮತ್ತು ವಿವಿಧ ರಾಜ್ಯ ಸರ್ಕಾರಗಳ ನಡುವಿನ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾವೇಶ ನಡೆಯುತ್ತಿದೆ. ಗಣಿಗಾರಿಕೆ ವಲಯದಲ್ಲಿ ಸದ್ಯ ನಡೆಯುತ್ತಿರುವ ಪ್ರಯತ್ನಗಳು ಮತ್ತು ರಾಜ್ಯ ಸರಕಾರಗಳು ಎನ್ಎಂಇಟಿ ನಿಧಿಯ ಪರಿಣಾಮಕಾರಿ ಬಳಕೆ ಕುರಿತು ಚರ್ಚೆಗಳು ನಡೆಯಲಿವೆ.