ಹೈದರಾಬಾದ್‌ಗೆ ಮುಂಬೈ ಸವಾಲು

ದುಬೈ, ನ. ೩- ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-೧೩ರ ತನ್ನ ೧೪ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಉತ್ತಮ ರನ್‌ರೇಟ್ ಹೊಂದಿರುವ ಸನ್‌ರೈಸರ್ಸ್ ತಂಡ ಕಡೇ ಪಂದ್ಯದಲ್ಲಿ ಕನಿಷ್ಠ ಗೆಲುವು ದಾಖಲಿಸಿದರೆ ಯಾವುದೇ ಲೆಕ್ಕಾಚಾರವಿಲ್ಲದೆ ಅಂತಿಮ ನಾಲ್ಕರ ಘಟ್ಟಕ್ಕೇರಲಿದೆ. ಹೀಗಾಗಿ ಸನ್‌ರೈಸರ್ಸ್ ಪಾಲಿಗೆ ಈ ಪಂದ್ಯ ಮಾಡು ಇಲ್ಲವೆ ಮಡಿ ಎನಿಸಿದೆ.
ಹ್ಯಾಟ್ರಿಕ್ ಗೆಲುವಿನೊಂದಿಗೆ ನೇರವಾಗಿ ಅರ್ಹತೆ ಪಡೆಯುವ ಗುರಿಯಲ್ಲಿರುವ ಸನ್‌ರೈಸರ್ಸ್ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ.ಸ್ಟಾರ್ ಬ್ಯಾಟ್ಸ್‌ಮನ್‌ಗಳಿದ್ದರೂ ತಂಡಕ್ಕೆ ದಿಢೀರ್ ಕುಸಿತದ ಭೀತಿ ಕಾಡುತ್ತಿದೆ.
ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡವನ್ನು ಕಾಡುತ್ತಿದೆ. ಜೇಸನ್ ಹೋಲ್ಡರ್ ತಂಡಕ್ಕೆ ಆಗಮಿಸಿದ ಬಳಿಕ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲ ತುಂಬುತ್ತಿದ್ದಾರೆ.
ಸಂದೀಪ್ ಶರ್ಮ, ಎಡಗೈ ವೇಗಿ ಟಿ.ನಟರಾಜನ್, ರಶೀದ್ ಖಾನ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಮತ್ತೊಂದೆಡೆ, ಮೊದಲ ತಂಡವಾಗಿ ಪ್ಲೇಆಫ್ ಖಾತ್ರಿಪಡಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ನಾಯಕ ರೋಹಿತ್ ಶರ್ಮ ಅನುಪಸ್ಥಿತಿಯಲ್ಲೂ ಕೈರಾನ್ ಪೊಲ್ಲಾರ್ಡ್ ಬಳಗ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆಯುತ್ತಿದೆ.
ಪಂದ್ಯ ಆರಂಭ: ರಾತ್ರಿ ೭.೩೦ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್