ಹೈದರಾಬಾದ್‌ಗೆ ಬಂದಿಳಿದ ಸ್ಪುಟ್ನಿಕ್ ಲಸಿಕೆ

ಹೈದರಾಬಾದ್, ಮೇ.೨- ಕೊರೋನಾ ವೈರಸ್ ವಿರುದ್ಧ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ನಂತರ ಭಾರತದಲ್ಲಿ ಬಳಸಲಾಗುವ ರಷ್ಯದ ಮೊದಲ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಬಂದಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಕೇಂದ್ರಕ್ಕೆ ತಲುಪಿಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಯೋಗಾಲಯದ ಸಿಇಒ ದೀಪಕ್ ಸಪ್ರಾ, ಭಾರತೀಯ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದ ಬಳಿಕ ಕಳೆದ ಸೆಪ್ಟಂಬರ್ ನಲ್ಲಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಶ್ಯದ ನೇರ ಹೂಡಿಕೆ ನಿಧಿಯೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿತ್ತು ಅದರಂತೆ , ಮೊದಲನೇ ಹಂತದಲ್ಲಿ ೧.೫ ಲಕ್ಷ ಕೋವಿಡ್ ಲಸಿಕೆಗಳು ಭಾರತಕ್ಕೆ ಆಗಮಿಸಿದೆ ಎಂದು ನುಡಿದರು.

ಇನ್ನು, ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಉಪಾಧ್ಯಕ್ಷ ರವಿ ಪ್ರಕಾಶ್ ಮಾಥುರ್ ಮಾತನಾಡಿ, ಗೋದಾಮುಗಳು ಮತ್ತು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಅನುಸರಿಸಬೇಕಾದ ಎಲ್ಲಾ ಮಾರ್ಗಸೂಚಿ ಜಾರಿಯಲ್ಲಿವೆ. ಜೊತೆಗೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದರು.