ಹೈಟೆಕ್ ಆದ ಯಶವಂತಪುರ ರೈಲ್ವೆ ನಿಲ್ದಾಣ ವಿಮಾನ ನಿಲ್ದಾಣ ಮಾದರಿಯಲ್ಲಿ ಮರು ವಿನ್ಯಾಸ

-ಹಾಲನೂರು ಆರ್ ರವೀಶ್
ಬೆಂಗಳೂರು: ಬೆಂಗಳೂರಿನ ಎರಡನೇ ಅತೀ ದೊಡ್ಡ ರೈಲ್ವೆ ನಿಲ್ದಾಣ ಅಂದರೆ, ಯಶವಂತಪುರ ರೈಲು ನಿಲ್ದಾಣ ಈಗ ಹೈಟೆಕ್ ಸ್ವರೂಪ ಪಡೆದುಕೊಂಡು ವಿಮಾನ ನಿಲ್ದಾಣಕ್ಕೆ ಬಂದ ಅನುಭವ ನೀಡುವಂತಿದೆ.
ವಿಮಾನ ನಿಲ್ದಾಣ ಮಾದರಿಯಲ್ಲಿ ಈ ನಿಲ್ದಾಣವನ್ನು ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ.ಮರುವಿನ್ಯಾಸಗೊಳಿಸುವ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ.


ಸದ್ಯದಲ್ಲೇ ಈ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಶ್ವದರ್ಜೆ ಮೂಲ ಸೌಕರ್ಯ ಗಳು ಲಭ್ಯವಾಗ ಲಿವೆ.
ದೇಶದ ೪೦೦ ರೈಲು ನಿಲ್ದಾಣಗಳನ್ನು ಮರು ವಿನ್ಯಾಸ ಯೋಜನೆಯಡಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ರೈಲ್ವೆ ಇಲಾಖೆ ೨೦೧೭ರಲ್ಲಿ ಯೋಜನೆ ರೂಪಿಸಿತ್ತು. ಮೊದಲ ಹಂತದಲ್ಲಿ ೨೩ ರೈಲು ನಿಲ್ದಾಣಗಳ ಮರು ವಿನ್ಯಾಸಕ್ಕೆ ಕ್ರಮ ಕೈಗೊಂಡಿತ್ತು. ಈ ಪಟ್ಟಿಯಲ್ಲಿ ಯಶವಂತಪುರ ರೈಲು ನಿಲ್ದಾಣವೂ ಸ್ಥಾನ ಪಡೆದಿತ್ತು. ಕಂಟೋನ್ಮೆಂಟ್ ರೈಲು ನಿಲ್ದಾಣವೂ ಈ ಪಟ್ಟಿಯಲ್ಲಿ ಇದೆ.೨೦೧೮ ರಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು.
ಸುಮಾರು ೨೦ ಎಕರೆ ಜಾಗ ಹೊಂದಿರುವ ಯಶವಂತಪುರ ರೈಲು ನಿಲ್ದಾಣದಲ್ಲಿ ನವೀಕರಣ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಆಕರ್ಷಕ ಕಮಾನುಗಳು,ಗಾಜಿನ ಮೇಲ್ಚಾವಣಿ ಪ್ರಯಾಣಿಕರನ್ನು ಸ್ವಾಗತಿಸುತ್ತವೆ.ರೈಲಿಗಾಗಿ ಕಾಯುವ ಪ್ರಯಾಣಿಕರು ವಿಶ್ರಾಂತಿ ಪಡೆದುಕೊಳ್ಳಲು ಟಿವಿ ಮತ್ತು ಶೌಚಾಲಯಗಳನ್ನೊಳಗೊಂಡ ವಿಶ್ರಾಂತಿ ಕೊಠಡಿಗಳು,ಊಟ ಮತ್ತು ಉಪಾಹಾರಕ್ಕೆ ಅತ್ಯಾಧುನಿಕ ಕ್ಯಾಂಟೀನ್‌ಗಳು ನಿರ್ಮಾಣಗೊಂಡಿವೆ.
ಹೈಟೆಕ್ ಶೌಚಾಲಯ, ನೀರಿನ ಕೂಲರ್‌ಗಳು, ಉಚಿತ ಮತ್ತು ರಿಯಾಯಿತಿ ದರದಲ್ಲಿ ವೈಫೈ ಸೌಕರ್ಯ, ಫ್ಯಾನ್‌ಗಳ ಅಳವಡಿಕೆ, ಎಟಿಎಂಗಳು, ಟಿ.ವಿಯನ್ನು ಒಳಗೊಂಡ ವಿಶ್ರಾಂತಿ ಕೊಠಡಿಗಳು, ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ, ಎತ್ತರಿಸಿದ ಮಾರ್ಗಗಳು, ಎಸ್ಕಲೇಟರ್‌ಗಳು, ಆಟೊ ಮತ್ತು ಟ್ಯಾಕ್ಸಿಗಳ ನಿಲುಗಡೆಗೆ ಸುಸಜ್ಜಿತ ಮತ್ತು ಕ್ರಮಬದ್ಧವಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.
ಕಾಮಗಾರಿ ಪೂರ್ಣಗೊಂಡ ನಂತರ, ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಬಂದಂತಹ ಅನುಭವ ಆಗಬೇಕು. ಟಿಕೆಟ್ ಕೌಂಟರ್‌ನಿಂದ ಹಿಡಿದು ಶೌಚಾಲಯದ ತನಕ ಎಲ್ಲವೂ ಹೈಟೆಕ್ ಆಗಿದೆ.ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ ಎನ್ನುತ್ತಾರೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು.
ನಿಲ್ದಾಣ ಪ್ರವೇಶಿಸಲು ಇರುವ ಸಣ್ಣ ಸಣ್ಣ ದ್ವಾರಗಳ ಬದಲಿಗೆ ದೊಡ್ಡದಾದ
ತಡೆರಹಿತ ದ್ವಾರ ನಿರ್ಮಿಸಲಾಗಿದೆ.
ಮುಂಭಾಗದಲ್ಲಿ ನಿರ್ಮಾಣಗೊಂಡಿರುವ ಆರು ಕಮಾನುಗಳು ಆಕರ್ಷಕವಾಗಿವೆ. ಎಲ್ಲವಕ್ಕೂ ಒಂದೇ ಬಣ್ಣದ ಗಾಜಿನ ಹೊದಿಕೆ ಹೊದಿಸಲಾಗಿದೆ. ಏಕರೂಪದ ವಿದ್ಯುದ್ದೀಪಗಳ ವ್ಯವಸ್ಥೆ ನಿಲ್ದಾಣಕ್ಕೆ ಮತ್ತಷ್ಟು ಮೆರಗು ತಂದಿದೆ.
ನಿಲ್ದಾಣದ ಹೊರಭಾಗದಲ್ಲಿ ಇರುವ ಎಲ್ಲ ಜಾಗವನ್ನೂ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ವಿಶಾಲವಾಗಿ ಅಭಿವೃದ್ಧಿ ಪಡಿಸಲಾಗಿದೆ.
ಪ್ರಯಾಣಿಕರನ್ನು ಇಳಿಸಿ ಹೋಗುವ ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳಿಗೆ ಪ್ರತ್ಯೇಕ ರಸ್ತೆ ಇರಲಿದೆ. ಬಿಎಂಟಿಸಿ ಬಸ್‌ಗಳು ನಿಲ್ದಾಣದ ಆವರಣಕ್ಕೆ ಬರುವಷ್ಟು ಜಾಗ ಕಲ್ಪಿಸಲಾಗುತ್ತಿದೆ. ರೈಲು ಇಳಿದ ಪ್ರಯಾಣಿಕರು ಆವರಣದಲ್ಲೇ ಬಸ್ ಏರಲು ಅವಕಾಶ ಆಗಲಿದೆ.
ಮೆಟ್ರೊ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪವೂ ಈ ಯೋಜನೆಯಲ್ಲಿ ಇದೆ.ಕೇಬಲ್ ಆಧರಿತ ಮೇಲ್ಸೇತುವೆ ನಿರ್ಮಾಣವಾದರೆ ಮೆಟ್ರೊ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಮೆಟ್ಟಿಲುಗಳನ್ನು ಇಳಿದು? ಹತ್ತುವ ಸಮಸ್ಯೆ ಇಲ್ಲವಾಗಲಿದೆ.ಈ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ವಹಿಸಲಿದೆ. ಅದಕ್ಕೆ ಬೇಕಿರುವ ಒಪ್ಪಿಗೆಯನ್ನು ನೈರುತ್ಯ ರೈಲ್ವೆ ಈಗಾಗಲೇ ನೀಡಿದೆ.ಇದೇನಾದರೂ ಆದರೆ ಮೆಟ್ರೋ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಸೇತುವೆ ನಿರ್ಮಾಣಗೊಂಡ ಮೊದಲ ರೈಲ್ವೆ ನಿಲ್ದಾಣ ಇದಾಗಲಿದೆ.
ರೈಲು ನಿಲ್ದಾಣ ಮತ್ತು ಮೆಟ್ರೊ ರೈಲು ನಿಲ್ದಾಣದ ನಡುವೆ ಇರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.
ಬಣ್ಣ ಬಣ್ಣದ ಹೂವಿನ ಗಿಡಗಳು, ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ, ಕುಟೀರ ಮಾದರಿಯ ವಿಶ್ರಾಂತಿ ತಾಣ, ಕಾರಂಜಿ ಕೊಳ, ಸುಂದರವಾದ ನೆಲಹಾಸು,ಸೆಲ್ಫಿ ತಾಣಗಳೂ ನಿರ್ಮಾಣವಾಗಿವೆ.ಪ್ರಯಾಣಿಕರು ಇಡೀ ರೈಲ್ವೆ ನಿಲ್ದಾಣ ಬರುವಂತೆ ಸೆಲ್ಫಿ ತೆಗೆದುಕೊಳ್ಳಬಹುದು.
ಯಶವಂತಪುರ ನಿಲ್ದಾಣದ ಪೂರ್ವ ಭಾಗದ ಪ್ರವೇಶ ದ್ವಾರವೂ ಸಹ ಹೈಟೆಕ್ ಆಗಿದೆ.ರಾಷ್ಟ್ರೀಯ ಹೆದ್ದಾರಿ ,ಮೆಟ್ರೋ ರೈಲ್ವೆ ನಿಲ್ದಾಣ ಹಾಗೂ ರೈಲು ನಿಲ್ದಾಣ ಒಟ್ಟೊಟ್ಟಿಗೆ ಇರುವ ಯಶವಂತಪುರ ರೈಲ್ವೆ ನಿಲ್ದಾಣ ಹಲವು ವಿಶೇಷಗಳೊಂದಿಗೆ ಅತ್ಯಾಧುನಿಕವಾಗಿ ರೂಪುಗೊಂಡಿದೆ.ಒಂದು ರೀತಿಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಿ ಬಂದ ಅನುಭವವಾಗುವುದಂತೂ ನಿಜ.
ನಗರದ ಅತೀ ಹೆಚ್ಚು ರೈಲು ಸಂಚಾರ ಹೊಂದಿರುವ ಎರಡನೇ ರೈಲು ನಿಲ್ದಾಣ ಅಂದರೆ ಯಶವಂತಪುರ. ಈ ನಿಲ್ದಾಣಕ್ಕೆ ಪೂರ್ವ ಮತ್ತು ಪಶ್ಚಿಮ ಎರಡೂ ಕಡೆ ಪ್ರವೇಶ ದ್ವಾರಗಳಿದ್ದು ಪ್ರಯಾಣಿಕರಿಗೆ ಹೆಚ್ಚಿಸಲು ಅನುಕೂಲವಾಗಲಿದೆ.ಒಂದು ರೀತಿಯಲ್ಲಿ ಹೊಲಸಾಗಿದ್ದ ಯಶವಂತಪುರ ರೈಲ್ವೆ ನಿಲ್ದಾಣ ಈಗ ಶೃಂಗಾರಗೊಂಡ ಮದುವಣಗಿತ್ತಿಯಂತೆ ಲಕಲಕ ಹೊಳೆಯುವಂತಿದೆ.