ಹೈಟಿಯಲ್ಲಿ ಹಿಂಸಾಚಾರ ತುರ್ತು ಪರಿಸ್ಥಿತಿ ಘೋಷಣೆ

ಪೋರ್ಟ್-ಔ-ಪ್ರಿನ್ಸ್ (ಹೈಟಿ), ಮಾ.೪- ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಗುಂಪೊಂದು ಹೈಟಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಲ್ಲಿರುವ ಮುಖ್ಯ ಕಾರಾಗೃಹಕ್ಕೆ ನುಗ್ಗಿ ಅನೇಕ ಕೈದಿಗಳನ್ನು ಬಿಡುಗಡೆ ಮಾಡಿದ ಘಟನೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಸದ್ಯ ರಾಜಧಾನಿ ಹೈಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ೭೨ ಗಂಟೆಗಳ ತುರ್ತು ಪರಿಸ್ಥಿತಿ ಮತ್ತು ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ.
ಕಾರಾಗೃಹದಲ್ಲಿ ಸುಮಾರು ೪೦೦೦ ಕೈದಿಗಳಿದ್ದು, ಬಹುತೇಕರು ಇದೀಗ ತಪ್ಪಿಸಿಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಕಾರಾಗೃಹದಲ್ಲಿ ಬಂಧಿತರಲ್ಲಿ ೨೦೨೧ರಲ್ಲಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಹತ್ಯೆಗೆ ಸಂಬಂಧಿಸಿದಂತೆ ಗ್ಯಾಂಗ್ ಸದಸ್ಯರು ಕೂಡ ಸೇರಿದ್ದಾರೆ ಎನ್ನಲಾಗಿದೆ. ಹೈಟಿಯಲ್ಲಿ ಇತ್ತೀಚಿಗಿನ ದಿನಗಳಲ್ಲಿ ಹಿಂಸಾಚಾರ ಮಿತಿಮೀರಿದ್ದು, ಅದರಲ್ಲೂ ಮುಖ್ಯವಾಗಿ ಪೋರ್ಟ್-ಔ-ಪ್ರಿನ್ಸ್‌ನಲ್ಲಿ ೮೦ ಪ್ರತಿಶತ ನಿಯಂತ್ರಣ ಹೊಂದಿರುವ ಪ್ರಧಾನಿ ಏರಿಯಲ್ ಹೆನ್ರಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಶಸ್ತ್ರ ಗುಂಪು ಹವಣಿಸುತ್ತಿದೆ. ಕೀನ್ಯಾ ನೇತೃತ್ವದ ಬಹುರಾಷ್ಟ್ರೀಯ ಭದ್ರತಾ ಪಡೆಯನ್ನು ಹೈಟಿಗೆ ಕಳುಹಿಸುವ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ಏರಿಯಲ್ ಹೆನ್ರಿ ಅವರು ನೈರೋಬಿಗೆ ಪ್ರಯಾಣಿಸಿದ ಬಳಿಕ ಹಿಂಸಾಚಾರ ಬುಗಿಲೆದ್ದಿದೆ. ಗ್ಯಾಂಗ್ ನಾಯಕ ಜಿಮ್ಮಿ ಚೆರಿಜಿಯರ್ ಅಲಿಯಾಸ್ ಬಾರ್ಬೆಕ್ಯೂ ದಾಳಿಯ ಮುಂದಾಳತ್ವ ಹೊಂದಿದ್ದು, ಪ್ರಧಾನಿ ಏರಿಯಲ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಂಘಟಿತ ದಾಳಿಯನ್ನು ಘೋಷಿಸಿದ್ದಾನೆ. ಇನ್ನು ಭಾನುವಾರವೂ ಕಾರಾಗೃಹದ ಬಾಗಿಲು ತೆರೆದಿದ್ದು, ಅಧಿಕಾರಿಗಳ ಗುರುತುಗಳು ಕಂಡುಬಂದಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಲಾಯನ ಮಾಡಲು ಯತ್ನಿಸಿದ ಮೂವರು ಕೈದಿಗಳು ಅಂಗಳದಲ್ಲಿ ಸತ್ತು ಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ.