ಹೈಕ ವಿಮೋಚನಾ ಅಮೃತ ಮಹೋತ್ಸವ – ಏಮ್ಸ್ ಘೋಷಿಸಲು ಸಿಎಂಗೆ ಆಗ್ರಹ

ಜಿಲ್ಲೆಗೆ ಏಮ್ಸ್ ಮಂಜೂರಾಗುವವರೆಗೂ ಹೋರಾಟ ಮುಂದುವರೆಯುವ ಎಚ್ಚರಿಕೆ
ರಾಯಚೂರು.ಸೆ.೧೬- ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ನಾಳೆ ಗುಲ್ಬರ್ಗಾದಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ಘೋಷಿಸುವಂತೆ ಏಮ್ಸ್ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ ಕಳಸ ಅವರು ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ಆದ್ಯತೆ ನೀಡಲಾಗುತ್ತದೆ ಎನ್ನುವ ಹೇಳಿಕೆಗಳು ನೀಡದೆ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಸಂಬಂಧಿಸಿದ ಸ್ಪಷ್ಟ ಆದೇಶ ಹೊರಡಿಸುವಂತೆ ಆಗ್ರಹಿಸಿದ್ದಾರೆ. ೧೨೭ ದಿನಗಳಿಂದ ಏಮ್ಸ್ ಹೋರಾಟ ನಿರಂತರ ನಡೆಯುತ್ತಿದೆ. ಸುಧೀರ್ಘ ೧೨೭ ದಿನಗಳ ಈ ಹೋರಾಟದಲ್ಲಿ ಜನರ ಭಾವನೆ ಮತ್ತು ಜಿಲ್ಲೆಗೆ ಏಮ್ಸ್ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಸರ್ಕಾರ ಈ ಹೋರಾಟ ಗಂಭೀರ ಪರಿಗಣಿಸಿ, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದೆ ನಡೆಯುವ ಹೋರಾಟಕ್ಕೆ ಸರ್ಕಾರಕ್ಕೆ ಹೊಣೆಯಾಗಬೇಕಾಗುತ್ತದೆ. ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಗೆ ೭೫ ವರ್ಷ ಕಳೆದರೂ, ಹೈದ್ರಾಬಾದ್ ಕರ್ನಾಟಕ ಭಾಗವಾದ ಜಿಲ್ಲೆಯೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳಿಂದ ವಿಮೋಚನೆಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಏಮ್ಸ್ ನೀಡುವ ಮೂಲಕ ಈ ಭಾಗದ ಬಹುದೊಡ್ಡ ಬೇಡಿಕೆಯನ್ನು ಈಡೇರಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ನಿರ್ವಹಿಸಬೇಕಾಗಿದೆ. ಶಾಂತ ರೀತಿಯಿಂದ ಹೋರಾಟ ನಡೆಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ, ಮುಂದೆ ಸರ್ಕಾರ ಪಾಶ್ಚತಾಪ ಪಡೆಬೇಕಾಗುತ್ತದೆಂದು ಎಚ್ಚರಿಸಿದ ಅವರು, ನಮ್ಮ ತಾಳ್ಮೆ ಪರೀಕ್ಷಿಸುವುದು ಬೇಡವೆಂದರು. ಶಾಸಕಾಂಗ ಸಭೆಯಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಅವರು ಈ ವಿಷಯದ ಬಗ್ಗೆ ಪ್ರಸ್ತಾಪಿಸಿ, ಸರ್ಕಾರ ತಕ್ಷಣವೇ ಜಿಲ್ಲೆಯ ಏಮ್ಸ್ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳು ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿದೆ.
ಏಮ್ಸ್ ದೊರೆಯುವವರೆಗೂ ಹೋರಾಟ ಮುಂದುವರೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಏಮ್ಸ್ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲವೆಂದರು. ಅಶೋಕ ಜೈನ್ ಅವರು ಮಾತನಾಡುತ್ತಾ, ಆದ್ಯತೆ ಎನ್ನುವುದು ಕೇವಲ ಹೇಳಿಕೆಯಾಗಿ ಉಳಿಯದೆ, ಈ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಏಮ್ಸ್ ಹಂಚಿಕೆ ಬಿಡುವುದಾಗಿ ಮುಖ್ಯಮಂತ್ರಿಗಳ ಹೇಳಿಕೆ ಸರಿಯಲ್ಲ. ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿ, ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸುವಂತೆ ಶಿಫಾರಸ್ಸು ಮಾಡುವ ಅಗತ್ಯವಿದೆ.
ಏಮ್ಸ್ ಹೋರಾಟಕ್ಕೆ ಜಿಲ್ಲೆಯ ಜನರ ಬೆಂಬಲಿಸುವಂತೆ ಮಾಡಲಾಗಿದೆ. ವ್ಯಾಪಕವಾಗಿ ಈ ಹೋರಾಟವನ್ನು ಮುಂದೊಯ್ಯಲಾಗುತ್ತಿದೆ. ಹೋರಾಟದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮತ್ತು ಬಸವನಗೌಡ ತುರ್ವಿಹಾಳ ಅವರು ಮಾತ್ರ ಭೇಟಿ ನೀಡಿಲ್ಲ. ಉಳಿದಂತೆ ಎಲ್ಲಾ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರು ಈ ಕ್ಷೇತ್ರದ ಜನರ ಹೋರಾಟವನ್ನು ಕೇಂದ್ರದ ಗಮನ ಸೆಳೆಯುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರಿಗೆ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಭಯ ಪಡುತ್ತಿದ್ದಾರೆ. ಸರ್ಕಾರವೂ ಸಹ ಭಯಪಡುತ್ತಿದೆ ಎನ್ನುವ ಅನುಮಾನ ಮೂಡಿತ್ತಿದೆ. ಏನೆಯಾದರೂ ಜಿಲ್ಲೆಗೆ ಏಮ್ಸ್ ಬರುವವರೆಗೂ ಹೋರಾಟ ನಿಲ್ಲುವುದಿಲ್ಲವೆಂದು ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ವೀರೇಶ ಬಾಬು, ಕಾಮರಾಜ ಪಾಟೀಲ್ ಉಪಸ್ಥಿತರಿದ್ದರು.