`ಹೈಕು-ತಾಂಕಾ ಅನ್ಯಭಾಷೆಯಲ್ಲೂ ಗೂಡು ಕಟ್ಟುತ್ತಿದೆ’

ಕಲಬುರಗಿ/ಗೋಕಾಕ್, ಮೇ 20:ಹೈಕು ಕಾವ್ಯ ಪ್ರಕಾರದಲ್ಲಿ ಇರುವೆಯ ಹೆಜ್ಜೆ ಸಪ್ಪಳವೂ ಕೇಳಿಸುತ್ತದೆ. ಇದು ಕಿರಿಯದರಲ್ಲಿ ಹಿರಿತನವನ್ನು ಮೆರೆಯುತ್ತಿದೆ ಮತ್ತು ಮಾತ್ರೆಗಳನ್ನಷ್ಟೇ ಬಯಸದೇ ಅದೊಂದು ಧ್ಯಾನಸ್ಥ ಸ್ಥಿತಿ. ಹೀಗಾಗಿ ಕನ್ನಡ ಸೇರಿದಂತೆ ಅನ್ಯಭಾಷೆಗಳಲ್ಲೂ ಗೂಡು ಕಟ್ಟುತ್ತಿದೆ ಎಂದು ಕಲಬುರಗಿ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.

ಗೋಕಾವಿ ಗೆಳೆಯರ ಬಳಗವು ಕೊರೊನಾ ಲಾಕ್‍ಡೌನ್ ನಿಮಿತ್ತ ಗೂಗಲ್ ಮೀಟ್‍ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೆಬಿನಾರ್‍ನ ಒಂಬತ್ತನೇ ಉಪನ್ಯಾಸ ಮಾಲಿಕೆಯಲ್ಲಿ `ಹೈಕು ಮತ್ತು ತಾಂಕಾ ಸಾಹಿತ್ಯ ಚಿಂತನೆ’ ಕುರಿತು ಉಪನ್ಯಾಸ ನೀಡಿದ ಅವರು, ಜಪಾನೀ ಕಾವ್ಯ ಪ್ರಕಾರವಾದ ಹೈಕು ಮತ್ತು ತಾಂಕಾ ಬರೆಯುವಾಗ ಉಚ್ಛಾರಾಂಶ (ಸಿಲೆಬಲ್) ನಿಯಮವನ್ನು ಒಳಗೊಂಡಿದೆ. 5-7-5 ಸಿಲೆಬಲ್‍ನಲ್ಲಿಯೇ ಬರೆಯಬೇಕು. ಅದನ್ನು ಮೀರದಂತೆ ಎಚ್ಚರ ವಹಿಸಬೇಕು. ವಾಚ್ಯಾರ್ಥವಾಗದಂತೆ ಬರೆಯುವುದನ್ನು ಅಧ್ಯಯನದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ರವೀಂದ್ರನಾಥ ಟ್ಯಾಗೋರ್ ಅವರು ಬಂಗಾಲಿ ಭಾಷೆಗೆ ಹೈಕು ಕಾವ್ಯವನ್ನು ಅನುವಾದ ಮಾಡುವುದರ ಮೂಲಕ ಭಾರತಕ್ಕೆ ಹೈಕು ತಂದ ಹೆಗ್ಗಳಿಕೆ ಹೊಂದಿದ್ದಾರೆ. ಕನ್ನಡದಲ್ಲಿ ಎಚ್.ಎಸ್.ಶಿವಪ್ರಕಾಶ, ಡಾ.ಕೆ.ಬಿ.ಬ್ಯಾಳಿ, ಫಕ್ರುದ್ದಿನ್, ಡಾ.ಸಿ.ರವೀಂದ್ರನಾಥ, ಸಿದ್ದರಾಮ ಹಿರೇಮಠ ಕೂಡ್ಲಿಗಿ, ಕೆ.ಬಿ.ರಂಗಸ್ವಾಮಿ ಸೇರಿದಂತೆ ಅನೇಕರು ಹೈಕು ಬಗ್ಗೆ ಕೃತಿಗಳನ್ನು ಪ್ರಕಟಿಸಿದ್ದಾರೆ ಎಂದು ರೆಡ್ಡಿ ಹೇಳಿದರು.

ಬೆಂಗಳೂರಿನ ಪ್ರಾಧ್ಯಾಪಕರಾಗಿದ್ದ ದಿ.ಪ್ರೊ.ವೇಣುಗೋಪಾಲ ಸೊರಬ ಅವರು ತಾಂಕಾ ಬಗ್ಗೆ ಬರೆದಿರುವುದನ್ನು ಹೊರತುಪಡಿಸಿ, ಇದೂವರೆಗೂ ತಾಂಕಾ ಸಂಕಲನ ಪ್ರಕಟವಾಗಿಲ್ಲ ಎಂಬುದನ್ನು ಅವರು ಪ್ರಸ್ತಾಪಿಸಿ, 5-7-5-7-7 ಸಿಲೆಬಲ್‍ನಲ್ಲಿಯೇ ತಾಂಕಾ ಬರೆಯಬೇಕೆಂಬ ನಿಯಮವಿದೆ ಎಂದು ಹೇಳಿದರು.

ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಜನ ಕವಿ,ಸಾಹಿತಿಗಳು,ಕಲಾವಿದರು ಸೇರಿದ ವೆಬಿನಾರ್ ಕಾರ್ಯಕ್ರಮದ ಕೊನೆಯ ಚರ್ಚೆಯಲ್ಲಿ ಭಾಗವಹಿಸಿದ್ದರು.

ಗೋಕಾಕ್‍ದ ಭಾವಯಾನ ಸಾಹಿತ್ಯ ಸಂಘಟನೆಯ ಸಂಸ್ಥಾಪಕರಾದ ಭಾರತಿ ಮದಬಾವಿ ಆಶಯ ಮಾತುಗಳನ್ನಾಡಿದರು. ಪ್ರೊ.ಶಿವಲೀಲಾ ಪಾಟೀಲ ಸ್ವಾಗತಿಸಿ, ಉಪನ್ಯಾಸಕರನ್ನು ಪರಿಚಯಿಸಿದರು.

ಗೆಳೆಯರ ಬಳಗದ ಸಂಸ್ಥಾಪಕ ಹಾಗೂ ವೆಬಿನಾರ್ ಸಂಚಾಲಕರಾಗಿರುವ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ. ಜಯಾನಂದ ಮಾದರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಹಿರಿಯ ಲೇಖಕರಾದ ಡಾ.ಚಂದ್ರಶೇಖರ ಅಕ್ಕಿ, ಡಾ.ಯಲ್ಲಪ್ಪ ಯಾಕೊಳ್ಳಿ ಸವದತ್ತಿ, ಡಾ.ಸುರೇಶ ಹನಗಂದಿ, ಡಾ.ಪ್ರೇಮಾ ಮೆನಶಿ, ಸಿದ್ದಲಿಂಗಪ್ಪ ಬೀಳಗಿ ಹುನಗುಂದ, ಡಾ.ಅರ್ಜುನ ಪಂಗಣ್ಣವರ, ಮಾರುತಿ ದಾಸನ್ನವರ, ಲಕ್ಷ್ಮಣ ಚೌರಿ, ವೀರಪ್ಪ ನಿಂಗೋಜಿ ಕೊಪ್ಪಳ, ಶಿವಕುಮಾರ ಕರನಂದಿ ಬಾಗಲಕೋಟೆ, ರಜನಿ ಜೀರಗ್ಯಾಳ, ಡಾ.ವಿದ್ಯಾರೆಡ್ಡಿ, ಶೈಲಾ ಗೋಕಾಕ್, ಪುಷ್ಪಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.