ಹೈಕಮಾಂಡ್ ಸೂಚನೆ ಮೇರೆಗೆ ಸ್ವರ್ಧೆ- ಸಿದ್ದರಾಮಯ್ಯ

ಕೋಲಾರ,ಮಾ,೨೫-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಗುಟ್ಟು ಬಿಟ್ಟುಕೊಡದೆ ಹೈಕಮಾಂಡ್ ಸೂಚನೆ ಮೇರೆಗೆ ಸ್ಪರ್ಧಿಸುತ್ತೇನೆ, ಎರಡ್ಮೂರು ದಿನಗಳಲ್ಲಿ ತೀರ್ಮಾನವಾಗುತ್ತದೆ ಎಂದು ತಿಳಿಸುವ ಮೂಲಕ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸದೆ ಇರುವುದರಿಂದ ಸಿದ್ದರಾಮಯ್ಯನವರ ಅಭಿಮಾನಿಗಳು ಗೊಂದಲದಲ್ಲಿ ಮುಳುಗಿದ್ದಾರೆ.
ಶುಕ್ರವಾರ ಬಂಗಾರಪೇಟೆ ಎಂಎಲ್‌ಎ ಎಸ್.ಎನ್.ನಾರಾಯಣಸ್ವಾಮಿ ಸಮ್ಮುಖದಲ್ಲಿ ಕೋಲಾರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್ ಅವರನ್ನು ಪಕ್ಷಕ್ಕೆ ಸಿದ್ದರಾಮಯ್ಯರ ನಿವಾಸದಲ್ಲಿ ಸೇರ್ಪಡೆ ಮಾಡಿಕೊಂಡ ಸಂದರ್ಭದಲ್ಲಿ ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕೋಲಾರದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿದಾಗ ಎಲ್ಲವೂ ಹೈಕಮಾಂಡ್ ತೀರ್ಮಾನ ಇದರಲ್ಲಿ ನನ್ನದೇನೂ ತೀರ್ಮಾನವಿಲ್ಲ, ಹೈಕಮಾಂಡ್ ಸೂಚನೆ ಮೇರೆಗೆ ಸ್ಪರ್ಧೆ ಮಾಡುತ್ತೇನೆ ಎಂಬ ಸಬೂಬು ನೀಡಿ ಕೋಲಾರದ ಮುಖಂಡರನ್ನು ಕಳುಹಿಸಿಕೊಟ್ಟಿದ್ದಾರೆ.
ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದ ಸ್ಪರ್ಧೆ ಬಗ್ಗೆ ಪ್ರಾರಂಭದಲ್ಲಿ ಇದ್ದ ಉಮಸ್ಸು ಸ್ವಲ್ಪ ಕಡಿಮೆಯಾದ್ದಂತೆ ಕಾಣುತ್ತಿದ್ದು, ೩ನೇ ಬಾರಿ ಕೋಲಾರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ, ಆದರೆ ಹೈಕಮಾಂಡ್ ಒಪ್ಪಬೇಕು ಎಂದು ಹೇಳಿದ್ದರು.
೪ನೇ ಬಾರಿಗೆ ಕೋಲಾರಕ್ಕೆ ಬಂದಾಗಲೂ ಮತ್ತಷ್ಟು ಉಮಸ್ಸಿನಿಂದ ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ, ಹೈಕಮಾಂಡನ್ನು ಒಪ್ಪಿಸಿಕೊಂಡು ಬರುತ್ತೇನೆ ಎಂದು ಹೇಳಿದವರು, ೫ನೇ ಬಾರಿಗೆ ಕೋಲಾರಕ್ಕೆ ಬರಬೇಕಿದ್ದ ಸಂದರ್ಭದಲ್ಲಿ ಹೈಕಮಾಂಡ್ ಇನ್ನೂ ಸೂಚನೆ ನೀಡಿಲ್ಲ ಎಂದು ಕಾರ್ಯಕ್ರಮ ರದ್ದುಪಡಿಸಿ ಮತ್ತೆ ಹೈಕಮಾಂಡ್ ಕಡೆ ಬೆಟ್ಟು ಮಾಡಿ ತೋರಿಸುತ್ತಿರುವುದರಿಂದ ಘಟಬಂಧನ್ ಮತ್ತು ಸಿದ್ದರಾಮಯ್ಯರ ಅಭಿಮಾನಿಗಳಲ್ಲಿ ನಿರಾಸೆ ಮೂಡುವಂತಾಗಿದೆ.
ಕೋಲಾರದಲ್ಲಿ ಬಹಿರಂಗ ಸಭೆಯ ಮೂಲಕ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಲ್.ನಾಗರಾಜ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಬೇಕಿತ್ತು, ಆದರೆ ದಿಡೀರನೆ ಶುಕ್ರವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.