ಹೈಕಮಾಂಡ್ ಸೂಚನೆ ನಿರೀಕ್ಷೆಯಲ್ಲಿ ಸಿಎಂ

ನವದೆಹಲಿ,ಜು.೩೧- ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್‌ನ ಹಸಿರು ನಿಶಾನೆಗಾಗಿ ಕಾಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿಯಾದ ನಂತರ ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ವರಿಷ್ಠ ನಾಯಕರನ್ನು ನಿನ್ನೆ ಭೇಟಿ ಮಾಡಿ ದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ಅವರು, ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರ ಸೂಚನೆಗಾಗಿ ಕಾಯುತ್ತಿದ್ದೇನೆ ಎಂದರು.
ಸಂಪುಟ ರಚನೆ ಸಂಬಂಧ ವರಿಷ್ಠರು ಕರೆದರೆ ಹೋಗಿ ಚರ್ಚೆ ಮಾಡುತ್ತೇನೆ, ಇಲ್ಲದಿದ್ದರೆ ಬೆಂಗಳೂರಿಗೆ ವಾಪಸ್ಸಾಗಿ ಮುಂದಿನವಾರ ವರಿಷ್ಠರು ಬಯಸಿದರೆ ದೆಹಲಿಗೆ ಬರುತ್ತೇನೆ ಎಂದರು.
ಇಂದು ಮಧ್ಯಾಹ್ನದ ಒಳಗೆ ಸಚಿವರಾಗುವವರ ಪಟ್ಟಿ ಹೈಕಮಾಂಡ್‌ನಿಂದ ಬರುತ್ತದೋ ಇಲ್ಲವೋ ಗೊತ್ತಿಲ್ಲ ಕಾದು ನೋಡಬೇಕು ಎಂದರು.

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗಳಿಗೆ ತೆರಳಿ ನಮನ ಸಲ್ಲಿಸಿದರು.


ಒಂದು ವೇಳೆ ಇಂದು ಹೈಕಮಾಂಡ್ ನಾಯಕರಿಂದ ಸಂಪುಟ ರಚನೆಗೆ ಹಸಿರು ನಿಶಾನೆ ಸಿಗದಿದ್ದರೆ ಮುಂದಿನ ವಾರ ದೆಹಲಿಗೆ ಬರುವ ಸಂದರ್ಭ ಬರಬಹುದು. ಒಂದು ವೇಳೆ ದೂರವಾಣಿ ಮಾತುಕತೆಯಲ್ಲೇ ಸಂಪುಟ ರಚನೆಯ ಮಾತುಕತೆ ಇತ್ಯರ್ಥವಾದರೆ ದೆಹಲಿಗೆ ಬರುವ ಅಗತ್ಯವಿರುವುದಿಲ್ಲ. ಎಲ್ಲವೂ ವರಿಷ್ಠರ ತೀರ್ಮಾನದ ಮೇಲೆ ನಿಂತಿದೆ ಎಂದರು.
ಜಿಲ್ಲಾಧಿಕಾರಿಗಳಿಗೆ ಸೂಚನೆ
ಪ್ರವಾಹಪೀಡಿತ ಪ್ರದೇಶಗಲ್ಲಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಪ್ರವಾಹಪೀಡಿತ ಜಿಲ್ಲೆಗಳ
ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲಾಧಿಕಾರಿಗಳು ತಮ್ಮ ಪಿಡಿ ಅಕೌಂಟ್‌ನಲ್ಲಿರುವ ಹಣ ಬಳಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಹೇಳಿದ್ದೇನೆ ಎಂದರು.
ಕೋವಿಡ್ ಮುನ್ನೆಚ್ಚರಿಕೆ
ನೆರೆಯ ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಮುನ್ನೆಚ್ಚೆರಿಕೆ ವಹಿಸುವಂತೆ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೋವಿಡ್‌ಗೆ ಸಂಬಂಧಿಸಿದ ಎಲ್ಲ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಜಿಎಸ್‌ಟಿ ಚರ್ಚೆ
ಇಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಾದ ಬಾಕಿ ಜಿಎಸ್‌ಟಿ ಹಣದ ಬಗ್ಗೆ ಚರ್ಚೆ ಮಾಡುತ್ತೇನೆ. ಕೇಂದ್ರದ ಯೋಜನೆಗಳಿಗೆ ಅನುದಾನ ನೀಡುವಂತೆಯೂ ಕೋರುತ್ತೇನೆ ಎಂದರು.

ಮೋದಿ ಮಾರ್ಗದರ್ಶನದಲ್ಲಿ ಆಡಳಿತ
ಪ್ರಧಾನಿ ನರೇಂದ್ರಮೋದಿ ಅವರ ಮಾರ್ಗದರ್ಶನದಲ್ಲಿ ಮಾದರಿ ಆಡಳಿತ ನೀಡಲು ಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ, ಅವರ ಜತೆಗಿನ ಈ ಭೇಟಿ ಚರ್ಚೆ ಸ್ಫೂರ್ತಿದಾಯಕವಾಗಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ರಾಜ್ಯದ ಜನರ ಸೇವೆ ಮಾಡಿ ಮಾದರಿ ಸರ್ಕಾರವನ್ನು ನೀಡುವ ಬದ್ಧತೆ ತಮ್ಮದು ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
ನಿನ್ನೆ ತಮಗೆ ಭೇಟಿ ಅವಕಾಶ ನೀಡಿ ಸ್ಫೂರ್ತಿದಾಯಕವೆನ್ನುವ ಚರ್ಚೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರಮೋದಿ ಅವರಿಗೆ ಧನ್ಯವಾದಗಳು ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.