ಹೈಕಮಾಂಡ್ ವಿಶ್ವಾಸ ಇರುವವರೆಗೆ ಸಿ.ಎಂ

ಬೆಂಗಳೂರು,ಜೂ.೬- ಭಾರತೀಯ ಜನತಾ ಪಕ್ಷದ ಹೈಕಮಾಂಡ್‌ನ ವಿಶ್ವಾಸವಿರುವವರೆಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುತ್ತೇನೆ, ಹೈಕಮಾಂಡ್ ಬೇಡ ಎಂದ ದಿನ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲೂ ಸಿದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ನಡೆದಿರುವ ಚಟುವಟಿಕೆಗಳು, ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟ ಸಂದೇಶ ನೀಡಿರುವ ಬೆನ್ನಲ್ಲೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ಹೈಕಮಾಂಡ್‌ನ ವಿಶ್ವಾಸ ಇರುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಯಾವ ದಿವಸ ನೀವು ಬೇಡ ಯಡಿಯೂರಪ್ಪನವರೇ ಎಂದು ವರಿಷ್ಠರು ಹೇಳುತ್ತಾರೋ ಆ ದಿವಸ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು, ನಾಯಕತ್ವ ಬದಲಾವಣೆ ಬಗ್ಗೆ ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಗಳು ಯಾವುದರ ಬಗ್ಗೆಯೂ ನಾನು ಪ್ರತಿಕ್ರಿಯಿಸುವುದಿಲ್ಲ. ಹೈ ಕಮಾಂಡ್‌ನ ನಂಬಿಕೆ, ವಿಶ್ವಾಸ ಇರುವವರೆಗೂ ಅಧಿಕಾರದಲ್ಲಿರುತ್ತೇನೆ. ನನ್ನಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವರಿಷ್ಠರು ನನಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ನನ್ನ ಶಕ್ತಿ ಮೀರಿ ಸದುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಉಳಿದಂತದ್ದು ಹೈಕಮಾಂಡ್‌ಗೆ ಬಿಟ್ಟದ್ದು ಎಂದರು.
ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ಸರಿಸಮನಾದ ಪರ್ಯಾಯ ನಾಯಕರು ಇರದಿದ್ದರೂ ಕೆಲವರು ನಾಯಕತ್ವ ಬದಲಾವಣೆಗೆ ನಡೆಸಿರುವ ಪ್ರಯತ್ನಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರ್ಯಾಯ ವ್ಯಕ್ತಿ
ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ದೇಶ ಹಾಗೂ ರಾಜ್ಯದಲ್ಲಿ ಪರ್ಯಾಯ ವ್ಯಕ್ತಿಗಳು ಯಾವಾಗಲೂ ಇದ್ದೇ ಇರುತ್ತಾರೆ. ಅದೇ ರೀತಿ ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿ ಯಾರೂ ಇಲ್ಲ ಎಂಬುದನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಹೈ ಕಮಾಂಡ್‌ನ ವಿಶ್ವಾಸವಿರುವವರೆಗೂ ಅಧಿಕಾರದಲ್ಲಿರುತ್ತೇನೆ ಅಷ್ಟೇ ಎಂದು ಪುನರುಚ್ಛರಿಸಿದರು.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಡೆದಿರುವ ಚಟುವಟಿಕೆಗಳ ಬಗ್ಗೆ ಟೀಕೆ-ಟಿಪ್ಪಣಿಗಳನ್ನು ಮಾಡುವುದಿಲ್ಲ ನನ್ನಲ್ಲಿ ಯಾವುದೇ ಗೊಂದಲ ಇಲ್ಲ ಎಂದವರು ಹೇಳುವ ಮೂಲಕ ಹೈ ಕಮಾಂಡ್ ಸೂಚಿಸಿದರೆ ರಾಜೀನಾಮೆಗೆ ಸಿದ್ಧ. ಸಂಘರ್ಷ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಹೈ ಕಮಾಂಡ್ ಹೇಳಿದರೆ ಪದತ್ಯಾಗಕ್ಕೂ ಸಿದ್ಧ ಎಂಬ ಸುಳಿವನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿರುವುದು ಸ್ಪಷ್ಟ.