ಹೈಕಮಾಂಡ್ ತೀರ್ಮಾನಿಸಿ ನನಗೆ ಟಿಕೆಟ್ ನೀಡಿದೆ: ಕೊಂಡಯ್ಯ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.13: ಟಿಕೆಟ್ ಅನೇಕರು ಕೇಳಿದ್ದರು, ಹೈಕಮಾಂಡ್ ತೀರ್ಮಾನಿಸಿ ಟಿಕೆಟ್ ನೀಡಿದೆ. ಟಿಕೆಟ್ ಬೇಕೆಂದವರೆಲ್ಲರ ಜೊತೆ ನಿನ್ನೆಯೇ ಮಾತನಾಡಿ ಇಂದು‌ ನಾಮ‌ಪತ್ರ ಸಲ್ಲಿಸಿರುವೆ. ನಮ್ಮಲ್ಲಿ ಅಸಮಾಧಾನ ಇಲ್ಲ ಎಂದು ವಿಧಾನ‌ಪರಿಷತ್ ನ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಹೇಳಿದರು.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು. ಕೇಂದ್ರದಲ್ಲಿ ಹೈಕಮಾಂಡ್, ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಾದವರು, ಜಿಲ್ಲೆಯಲ್ಲಿ ಅಲ್ಲಂ‌ ವೀರಭದ್ರಪ್ಪ, ನಾಸೀರ್ ಹುಸೇನ್ ಮೊದಲಾದವರು ಚರ್ಚಿಸಿ ಟಿಕೆಟ್ ನೀಡಿದ್ದಾರೆ ಗೆಲುವಿಗಾಗಿ ಎಲ್ಲರೂ ಶ್ರಮಿಸಲಿದ್ದಾರೆಂದರು.
ನಾನು 1996 ರಲ್ಲಿಯೇ ಪಂಚಾಯ್ತಿ ಸದಸ್ಯರಿಗೆ ಮತದಾನದ ಹಕ್ಕಿಗಾಗಿ‌ ಹೋರಾಟ  ಮಾಡಿದ್ದೆ. ಚುನಾವಣೆ ನಡೆಸದೇ ನಾಮ ನಿರ್ದೇಶಿತ ಸದಸ್ಯರ ನೇಮಕಕ್ಕೆ ಮುಂದಾದಾಗ ಅದರ ವಿರುದ್ದ ನ್ಯಾಯಾಲಯಕ್ಕೆ ಹೋಗಿ ಚುನಾವಣೆ ನಡೆಸಿ ಹೊಸ ಸದಸ್ಯರ ಆಯ್ಕೆ ಮಾಡುವಂತಾಯಿತು. ಗ್ರಾಮ‌ಪಂಚಾಯ್ತಿ ಸದಸ್ಯರ ಹಕ್ಕುಗಳು ಏನು ಎಂಬುದನ್ನು ಪಂಚಾಯ್ತಿ, ಪಂಚಾಯ್ತಿ   ತಿರುಗಾಡಿ ಹೇಳಿರುವೆ. ಅವರ ಸಂಪರ್ಕ‌ ನನಗೆ ಇದೆ ಎಂದರು.
ಬಿಜೆಪಿ ಅಭ್ಯರ್ಥಿ ಮಗನ ವ್ಯವಹಾರದ ಪಾಲುದಾರ ಎಂಬ ಪ್ರಶ್ನೆಗೆ ಸಹಜ, ವ್ಯವಹಾರ ಬೇರೆ ರಾಜಕೀಯ ಬೇರೆ, ಅವರ ಪ್ರಯತ್ನ ಅವರಿಗೆ ನಮ್ಮ ಪ್ರಯತ್ನ ನಮಗೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ರಾಜ್ಯ ಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್,
ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಂಡೂರು ಶಾಸಕ ತುಕರಾಂ, ಹಡಗಲಿ ಶಾಸಕ‌ ಪಿ.ಟಿ.ಪರಮೇಶ್ವರ ನಾಯ್ಕ, ಮಾಜಿ ಶಾಸಕರಾದ ಸೂರ್ಯನಾರಾಯಣ ರೆಡ್ಡಿ,  ಅನಿಲ್ ಲಾಡ್ ಪಕ್ಷದ ನಗರ ಮತ್ತು ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಹಾಗು‌ ಬಿ.ವಿ.ಶಿವಯೋಗ,
ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ ಕುಬೇರ, ಮುಲ್ಲಂಗಿ ನಂದೀಶ್, ಆಂಜನೇಯುಲು, ಪಕ್ಷದ ಮುಖಂಡರಾದ ಎ.ಮಾನಯ್ಯ, ಮುಂಡರಗಿ ನಾಗರಾಜ್, ದೊಡ್ಡರಾಮಣ್ಣ, ಎಂ.ಶ್ರೀಧರ್, ಅಯಾಜ್, ಆರ್, ಸುನೀಲ್ , ಸೂರಿ, ವೆಂಕಟೇಶ್ ಹೆಗಡೆ, ಎಲ್.ಮಾರೆಣ್ಣ, ಎರಕಲ್ ಎರ್ರಿಸ್ವಾಮಿ, ಮೊದಲಾದವರು ಇದ್ದರು.