ಹೇರೂರ್(ಬಿ) ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ಗೈರು ವಿರೋಧಿಸಿ ಪ್ರತಿಭಟನೆ

ಕಲಬುರಗಿ:ಮಾ.06: ತಾಲ್ಲೂಕಿನ ಹೇರೂರ್ (ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯಕ್ಕೆ ಗೈರಾಗಿರುವುದರಿಂದ ಹೊಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿ ಸೋಮವಾರ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಗಂಡ ಶಿವಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಲಿ, ಕಬ್ಬಲಿಗ ಎಸ್‍ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಿವಮ್ಮ ಗಂಡ ಯಲ್ಲಾಲಿಂಗ್, ಪ್ರಮುಖರಾದ ಮರೆಪ್ಪ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ್ ಭೀಮರಾಯ್, ಚಂದಮ್ಮ ನಿಂಗಣ್ಣ, ಭಾರತಿ ಗಂಡ ಚಂದ್ರಶೇಖರ್, ತಿಪ್ಪಣ್ಣ ತಂದೆ ಧರ್ಮಣ್ಣ, ವಿಜಯಕುಮಾರ್ ತಂದೆ ಬೀರಪ್ಪ, ಸುಂದರಮ್ಮ ಗಂಡ ಮೋಹನ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ ಮಹಾಂತೇಶ್ ತಳವಾರ್ ಅವರು ಕೇವಲ 15 ದಿನಗಳವರೆಗೆ ಮಾತ್ರ ಕಾರ್ಯನಿರ್ವಹಿಸಿದ್ದಾರೆ. ನಂತರ ಶ್ರೀಮತಿ ಭಾರತಿ ಮಣ್ಣೂರ್ ಅವರನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೆಂದು ನಿಯೋಜನೆ ಮಾಡಿದ್ದು, ನಂತರ ಮತ್ತೆ ಕಳೆದ 2013ರ ಫೆಬ್ರವರಿ 4ರಂದು ಮತ್ತೆ ಮಹಾಂತೇಶ್ ತಳವಾರ್ ಅವರನ್ನು ನೇಮಕ ಮಾಡಲಾಗಿದೆ. ಆದಾಗ್ಯೂ, ಶ್ರೀಮತಿ ಭಾರತಿ ಮಣ್ಣೂರ್ ಅವರು ನಿಯೋಜನೆ ನಂತರವೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ ಮಹಾಂತೇಶ್ ತಳವಾರ್ ಇಲ್ಲವೇ ಶ್ರೀಮತಿ ಭಾರತಿ ಮಣ್ಣೂರ್ ಅವರಿಬ್ಬರಲ್ಲಿ ಯಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಂಬುದು ಇಲ್ಲಿಯತನಕ ನಿಗೂಢವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಇಲ್ಲವೆಂದ ಮೇಲೆ ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದರು.