ಹೇಮಾವತಿ ನೀರು ಪೈಪ್‌ಲೈನ್ ಅಳವಡಿಕೆ ವಿಚಾರದಲ್ಲಿ ಮಾರಾಮಾರಿ

ಅರಸೀಕೆರೆ, ಜು. ೨೫- ತಾಲ್ಲೂಕಿನ ಹೊಸಕೆರೆಗೆ ಹೇಮಾವತಿ ನೀರು ಹರಿಸುವ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಶಂಕುಸ್ಥಾಪನೆ ವಿಚಾರವಾಗಿ ಬಿಜೆಪಿ ಮುಖಂಡರು ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡರ ಬೆಂಬಲಿಗರ ನಡುವೆ ಮಾರಾಮರಿ ನಡೆದಿದೆ.
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೇಟಿಕುರ್ಕೆ ಗ್ರಾಮದ ಹೊಸಕೆರೆ ಮತ್ತು ಚಿಕ್ಕೊಂಡಿಹಳ್ಳಿಗೆ ಹೇಮಾವತಿ ನದಿ ಮೂಲದಿಂದ ನೀರನ್ನು ತರಲು ಪೈಪ್‌ಲೈನ್ ಅಳವಡಿಸಲು ಕಾಮಗಾರಿ ಶಂಕುಸ್ಥಾಪನೆಗೆ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಆಗಮಿಸಿ ಭೂಮಿ ಪೂಜೆ ನೆರವೇರಿಸಿದ ನಂತರ ಬಿಜೆಪಿ ಪಕ್ಷದ ಮಾಜಿ ತಾಲ್ಲೂಕು ಅಧ್ಯಕ್ಷ ಲೋಕೇಶ್, ಹಾಲಿ ಅಧ್ಯಕ್ಷ ರಮೇಶ್ ಹಾಗೂ ಕಾರ್ಯಕರ್ತರು ಶಾಸಕ ಕೆ.ಎಂ. ಶಿವಲಿಂಗೇಗೌಡರ ಬಳಿ ನೀವು ಸರ್ಕಾರದ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿ ಭೂಮಿ ಪೂಜೆಯನ್ನು ಹಮ್ಮಿಕೊಂಡಿದ್ದು ಸರ್ಕಾರಿ ಅಧಿಕಾರಿಗಳು ಬಂದಿಲ್ಲ, ಪತ್ರಿಕೆ ಮಾಡಿಸಿಲ್ಲ. ಈ ರೀತಿ ಏಕಾಏಕಿ ಬಂದು ಪೂಜೆ ನೆರವೇರಿಸುವುದು ಸರಿಯಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮಾತನಾಡಿ ಕಾಮಗಾರಿಗೆ ಮಾತ್ರ ಭೂಮಿ ಪೂಜೆ ನೆರವೇರಿಸಲಾಗಿದೆ. ನೀರು ಹರಿಸುವಾಗ ಉಸ್ತುವಾರಿ ಸಚಿವರನ್ನೇ ಕರೆಸಿ ಕಾರ್ಯಕ್ರಮವನ್ನು ಮಾಡೋಣವೆಂದು ಹೇಳಿದರು. ಇದಕ್ಕೆ ಬಿಜೆಪಿ ಕಾರ್ಯಕರ್ತರು ಖಂಡಿಸುವುದಾಗಿ ಹೇಳಿದರು.
ಪ್ರಕರಣ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ, ಖಾಸಗಿ ಕಾರ್ಯಕ್ರಮವಾಗಿದೆ. ಎರಡು ಕೆರೆಗಳಿಗೆ ನೀರನ್ನು ಹರಿಸುವ ನಿಟ್ಟಿನಲ್ಲಿ ಸರಕಾರದಿಂದ ೨.೫ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಹೇಮಾವತಿ ಇಲಾಖೆಗೆ ಅನುಮೋದನೆ ನೀಡಿದ್ದು ಹೊನ್ನವಳ್ಳಿ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸುವ ಯೋಜನೆ ಇದು ಎಂದು ಹೇಮಾವತಿ ಇಲಾಖೆ ಅಧಿಕಾರಿ ನಾಗಭೂಷಣ್ ತಿಳಿಸಿದ್ದಾರೆ.