ಹೇಮಾವತಿ ನೀರು ಚರಂಡಿ ಪಾಲು

ಮಧುಗಿರಿ, ಡಿ. ೧೯- ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಹೇಮಾವತಿ ನೀರು ಕಳೆದ ೧ತಿಂಗಳಿಂದ ಚರಂಡಿ ಪಾಲಾಗುತ್ತಿದೆ. ರಿಪೇರಿ ಮಾಡಿಸುವ ಗೋಜಿಗೆ ಪುರಸಭೆ ಆಡಳಿತ ಹೋಗಿಲ್ಲದ ಕಾರಣ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಸಿದ್ಧಾಪುರ ಗೇಟ್ ಬಳಿ ಜಲದಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಪೈಪ್‌ಲೈನ್ ಒಡೆದು ಹೋಗಿ ಸುಮಾರು ೧ ಕಿಲೋಮೀಟರ್‌ನಷ್ಟು ದೂರ ನೀರು ಪೋಲಾಗುತ್ತಿದೆ. ಈ ನೀರಿನಿಂದ ರಸ್ತೆ ಹಾಳಾಗುತ್ತದೆ ಎಂಬ ದೃಷ್ಟಿಯಿಂದ ಈ ನೀರನ್ನು ಚರಂಡಿಗೆ ಹರಿಬಿಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಪೈಪ್‌ಲೈನ್ ಒಡೆದು ಹೋಗಿರುವ ಜಾಗ ಒಂದೆಡೆಯಾದರೆ ನಾಮಕಾವಸ್ಥೆಗೆ ಮತ್ತೊಂದೆಡೆ ರಿಪೇರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಲಕ್ಷಾಂತರ ರೂ. ಖರ್ಚು ಮಾಡಿ ಸಿದ್ದಾಪುರ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸುತ್ತಿದ್ದು ಈ ಬಗ್ಗೆ ರಾಜಕೀಯ ಜಟಾಪಟಿಗಳು ನಡೆಯುತ್ತಿದ್ದರೂ ಕೂಡ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ.
ಪುರಸಭಾ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಈ ನೀರನ್ನು ಬಿಡುತ್ತಿದ್ದಾರೆ. ನೀರಿದ್ದರೂ ನೀರಿನ ಕೃತಕ ಸಮಸ್ಯೆ ಉದ್ಭವವಾಗಿದೆ. ಈ ನಡುವೆ ಈ ಪೈಪ್‌ಲೈನ್‌ನಿಂದ ಪೋಲಾಗುತ್ತಿರುವ ನೀರನ್ನು ಸರಿಪಡಿಸಿ ನಾಗರಿಕರ ಉಪಯೋಗಕ್ಕೆ ಹರಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.