ಹೇಮಾವತಿ ನೀರಿಗೆ ಅಡ್ಡಿಪಡಿಸಿದವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ: ಜಿಎಸ್‌ಬಿ

ತುಮಕೂರು, ಅ. ೨೯- ಸಿರಾ ವಿಧಾನಸಭಾ ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಸದ ಜಿ.ಎಸ್. ಬಸವರಾಜು ಅವರು ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಅವರ ಪರವಾಗಿ ಕಳ್ಳಂಬೆಳ್ಳ ಹೋಬಳಿಯ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ನಡೆಸಿದರು.
ಕಳ್ಳಂಬೆಳ್ಳ ಹೋಬಳಿ ತರೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಪರ ಪ್ರಚಾರ ನಡೆಸಿ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು, ತುಮಕೂರು ಜಿಲ್ಲೆಗೆ ನಿಗದಿಯಾದ ೨೪ ಟಿಎಂಸಿ ಹೇಮಾವತಿ ನೀರು ಹರಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರು ನಾಲೆಗೆ ಮರಳು ಸುರಿದು ಅಡ್ಡಹಾಕಿ ತುಮಕೂರು ಜಿಲ್ಲೆಗೆ ನೀರು ಹರಿಯದಂತೆ ಮಾಡುತ್ತಾರೆ. ಇಂತಹವರು ಸಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳಲು ದೇವೇಗೌಡರ ಇಡೀ ಕುಟುಂಬವೇ ಸಿರಾದಲ್ಲಿ ಮೊಕ್ಕಾಂ ಹೂಡಿದೆ. ಮತದಾರರು ಈ ಉಪಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ದೇವೇಗೌಡರದ್ದು ಚಂಡಿ ಆಟ
ಈ ಹಿಂದೆ ರಕ್ತಬೇಕಾದರು ಕೊಡುತ್ತೇವೆ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬಿಡುವುದಿಲ್ಲ ಎಂಬ ಹೇಳಿಕೆಗಳನ್ನು ನೀಡಿದ್ದರು. ಆದರೆ ಇಂದು ಸಿರಾದಲ್ಲಿ ಕುಳಿತು ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳುತ್ತಿದ್ದಾರೆ. ಒಂದು ರೀತಿ ದೇವೇಗೌಡರು ಚಂಡಿ ಆಟ ಆಡುತ್ತಿದ್ದಾರೆ ಎಂದರು.
ಜಯಚಂದ್ರ ಅವರು ೬ ಸಲ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಬೀಗುತ್ತಿದ್ದು, ಆ ೬ ವರ್ಷದಲ್ಲಿ ೩ ವರ್ಷ ನನ್ನ ಕೊಡುಗೆಯಿಂದಲೇ ಗೆದ್ದಿರುವಂತಹದ್ದು. ಜಯಚಂದ್ರ ಜಿಲ್ಲಾ ಮಂತ್ರಿಯಾಗಿ ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ, ಸಿರಾ ಕ್ಷೇತ್ರ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಗುಡಿಸಲಲ್ಲೇ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ದೇವೇಗೌಡರನ್ನು ತುಮಕೂರಿನಲ್ಲಿ ನಿಲ್ಲಿಸಿ, ಅವರ ಸೋಲಿಗೆ ಜಯಚಂದ್ರ ಅವರೂ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಕೊರೊನಾ ಮಹಾಮಾರಿ ಇಡೀ ವಿಶ್ವಕ್ಕೇ ವ್ಯಾಪಿಸಿರುವ ಈ ಸಂದರ್ಭದಲ್ಲಿ ನಮ್ಮ ದೇಶದಲ್ಲೂ ಸೋಂಕು ಹೆಚ್ಚಾಗಿದೆ. ಇಂತಹ ವೇಳೆಯಲ್ಲೂ ಸಹ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯದಲ್ಲೂ ಸಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಮೂರು ಬಾರಿ ಪ್ರವಾಹ ಬಂದರೂ ಎದೆಗುಂದದೆ ಪರಿಹಾರೋಪಾಯಗಳನ್ನು ಸಮರೋಪಾದಿಯಲ್ಲಿ ಮಾಡಿದ್ದಾರೆ. ಅದೇ ರೀತಿ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಇಂದು ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಯುವ ಪ್ರತಿಭೆ, ಅಭಿವೃದ್ಧಿಪರ ಚಿಂತಕ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಗೆಲ್ಲುವುದು ಖಚಿತ. ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಗೆಲುವಿನಂತೆಯೇ ಈ ಬಾರಿ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಡಾ. ರಾಜೇಶ್‌ಗೌಡ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಇತ್ತು, ಆದರೆ ಈಗಿಲ್ಲ, ಅದು ರಾಜೀವ್‌ಗಾಂಧಿ ಕಾಲಕ್ಕೆ ಹೋಯ್ತು. ಈಗಿನ ಕಾಂಗ್ರೆಸ್ ನಾಯಕರಿಗೆ ಏನೂ ಗೊತ್ತಿಲ್ಲ. ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ನ ಕೊಡುಗೆ ಶೂನ್ಯ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೨ ವರ್ಷ ಕಳೆದರೂ ಹಿಂದೆಂದೂ ಯಾವ ಸರ್ಕಾರಗಳು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ರಾಷ್ಟ್ರದ ಅಭಿವೃದ್ಧ ಮತ್ತು ರೈತರ ಅಭಿವೃದ್ಧಿಗೋಸ್ಕರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತಷ್ಟು ಶಕ್ತಿ ತುಂಬಲು ಈ ಉಪಚುನಾವಣೆಯಲ್ಲಿ ಡಾ.ರಾಜೇಶ್‌ಗೌಡ ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ನಂಜೇಗೌಡ, ಗ್ರಾಮದ ಮುಖಂಡರಾದ ನಂದೀಶಪ್ಪ, ರಮೇಶ್, ಪೆದ್ದರಾಜು, ಹೊನ್ನುಡಿಕೆ ಲೋಕೇಶ್, ಕಾಟೇನಹಳ್ಳಿ ಕುಮಾರ್, ಕಡೇಹಳ್ಳಿಕುಮಾರ್, ಶಿವರುದ್ರಯ್ಯ, ಗುಬ್ಬಣ್ಣ ಗಂಜಲಗುಂಟೆ ಮತ್ತಿತರರು ಭಾಗವಹಿಸಿದ್ದರು.