ಹೇಮಲತಾ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದು

ರಾಯಚೂರು, ಫೆ.೨೮- ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ(ಎಸ್‌ಸಿ) ಪ್ರಮಾಣ ಪತ್ರ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ನಗರದ ವಾರ್ಡ್ ೧೯ರ ನಗರಸಭೆ ಸದಸ್ಯರಾದ ಹೇಮಲತಾ ಬೂದೆಪ್ಪ ಅವರ ಎಸ್‌ಸಿ ಜಾತಿಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರದ್ದುಗೊಳಿಸಿ
ಆದೇಶಿಸಿದೆ.
ತೆಲಂಗಾಣ ಮೂಲದರಾದ ಹೇಮಲತಾ ಅವರು ಕ್ರೈಸ್ತಧರ್ಮಕ್ಕೆ ಸೇರಿದವರಾಗಿದ್ದು, ನಗರಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ (ಮಹಿಳೆ) ಮೀಸಲಾತಿ ವಾರ್ಡ್‌ನಿಂದ ಈ ಹಿಂದೆ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಲ್ಲದೇ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂಬೇಡ್ಕರ್ ನಗರದ ಜಿ. ಮಹೇಶ ಎನ್ನುವವರು ಈ ಕುರಿತಂತೆ ನೀಡಿದ ದೂರಿನ ಮೇರೆಗೆ ಜಾರಿ ನಿರ್ದೇಶನಾಲಯವು ರಾಯಚೂರ ತಹಸೀಲ್ದಾರರಿಂದ ವರದಿಯನ್ನು ಪಡೆದು ಪರಿಶೀಲನೆ ನಡೆಸಿದರು.
ಸರ್ವೋಚ್ಚ ನ್ಯಾಯಾಲಯದ ದಿ.೧೮-೭-೧೯೯೪ ರ ತೀರ್ಪಿನ ಪ್ರಕಾರ ರಾಜ್ಯಕ್ಕೆ ಬೇರೆ ರಾಜ್ಯದಿಂದ ವಲಸೆ ಬಂದಂತಹ ವ್ಯಕ್ತಿಯೂ ರಾಜ್ಯದಲ್ಲಿ
ಎಸ್ಸಿ ಮತ್ತು ಎಸ್‌ಟಿ ಮೀಸಲು ಪಡೆಯಲು ಅರ್ಹರಲ್ಲವೆಂದು ಆದೇಶ ನೀಡಿದೆ. ಆದರೆ ಹೇಮಲತಾ ಬೂದೆಪ್ಪ ಅವರು ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ದೂರುದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ, ಸದಸ್ಯ ಕಾರ್ಯದರ್ಶಿಗಳಾದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಸಮಿತಿ ಸದಸ್ಯರಾದ ರಾಯಚೂರು ತಹಸೀಲ್ದಾರ, ಜಿ.ಪಂ.ಉಪ ಕಾರ್ಯದರ್ಶಿ ಅವರನ್ನು ಒಳಗೊಂಡ ಸಮಿತಿಯು ನಿನ್ನೆ (ದಿ.೨೭) ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ ಆದೇಶಿಸಿದೆ.
ತಹಸೀಲ್ದಾರರು ಹಾಗೂ ಜಾರಿನಿರ್ದೇಶನಾಲಯದಿಂದ ಜಾತಿಪ್ರಮಾಣ ಪತ್ರದ ವಿಚಾರಣೆ ನಡೆಸಿ, ವರದಿಯಲ್ಲಿ ಉಲ್ಲೇಖಿಸಲಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿ ಸಮಿತಿಯು ಈ ಆದೇಶ ನೀಡಿದೆ. ಹೇಮಲತಾ ಬೂದೆಪ್ಪ ಅವರು ನಾನು ಕಳೆದ ೨೦ ವರ್ಷಗಳಿಂದ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದೇನೆ. ನಾನು ಪರಿಶಿಷ್ಟ ಜಾತಿಗೆ ಸೇರಿದ್ದೇನೆ ಎಂದು ೧೯-೨-೨೦೧೩ ರಂದು ಹಾಗೂ ೯-೮-೨೦೧೮ರಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ ಎಂದು ದಾಖಲೆಗಳ ಸಮೇತ ಜಿ.ಮಹೇಶ ನೀಡಿದ ದೂರನ್ನು ಪರಿಶೀಲನೆ ನಡೆಸಿ ಜಿಲ್ಲಾ ಜಾತಿ ಪರಿಶೀಲನೆ ಸಮಿತಿಯು ಹೇಮಲತಾ ಅವರ ಎಸ್‌ಸಿ ಜಾತಿ ಪ್ರಮಾಣ ಪತ್ರ ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ.