ಹೇಮರಡ್ಡಿ ಮಲ್ಲಮ್ಮ ಭಕ್ತಿಯ ಚಿಂತನಾ ಚೆಲುಮೆ

ದೇವದುರ್ಗ,ಮೇ.೧೧- ಶಿವಶರಣೆ ಶ್ರೀಹೇಮರೆಡ್ಡಿ ಮಲ್ಲಮ್ಮ ಅವರು ಭಕ್ತಿ ಹಾಗೂ ಬದುಕಿನ ಆಧ್ಯಾತ್ಮಿಕ ಚಿಂತನಾ ಚೆಲುಮೆಯಾಗಿದ್ದರು. ಭಗವಂತನ ಸಾಕ್ಷಾತ್ಕಾರ ಪಡೆಯಲು ಭಕ್ತಿಯ ಮಾರ್ಗ ತೋರಿಸಿದ್ದಾರೆ. ಅವರ ಆದರ್ಶಗಳು ಮನುಷ್ಯನ ಬದುಕಿಗೆ ದಾರಿದೀಪವಾಗಿವೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜೀವನ ಚರಿತ್ರೆ ಮನುಕುಲಕ್ಕೆ ಮಾದರಿಯಾಗಿದೆ. ಅವರ ಸರಳ ಜೀವನ ಸುಖಿ ಜೀವನಕ್ಕೆ ನಾಂದಿ ಹಾಡಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭರತ ಭೂಮಿ ಕಂಡ ಶ್ರೇಷ್ಠ ಮಹಿಳೆ.
ನಾಡಿಗೆ ಶರಣರು, ದಾಸರು, ಸಂತರು ಸೇರಿ ಮಹಾನ್ ವ್ಯಕ್ತಿಗಳು ತತ್ವಾದರ್ಶಗಳನ್ನು ನೀಡಿದ್ದಾರೆ. ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡದೆ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಶರಣರು ಹಾಕಿಕೊಟ್ಟ ಬಸವಪಥದಲ್ಲಿ ಸಾಗಿದರೆ ಶಾಂತಿ, ಸಮೃದ್ಧಿ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಹಿರಿಯ ಅಧಿಕಾರಿ ನಾಗೇಂದ್ರಪ್ಪ ಮುಖಂಡರಾದ ಲಕ್ಷ್ಮಣ ಕೊಪ್ಪರ್, ಅನಿಲ್ ಕುಮಾರ್, ಸರ್ದಾರ್, ರವಿಕುಮಾರ್ ಬಲಿದವ್, ವೆಂಕಟೇಶ್ ದಾಸರ್, ಕನಕಪ್ಪ, ಹರೀಶ್ ಇತರರಿದ್ದರು.