ಹೇಮನಾಳ ಪಿಡಿಒ ವಿರುದ್ಧ ಕ್ರಮಕ್ಕೆ ಒತ್ತಾಯ

ದೇವದುರ್ಗ.ನ.೧೩- ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ನಡೆದ ಅವ್ಯವಹಾರದಲ್ಲಿ ಭಾಗಿಯಾದ ಹೇಮನಾಳ ಗ್ರಾಪಂ ಪಿಡಿಒ ಅಮಾನತು ಮಾಡುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿಯಲ್ಲಿ ಇಒ ಪಂಪಾಪತಿ ಹಿರೇಮಠಗೆ ಸುವರ್ಣ ಕರ್ನಾಟಕ ಜನಶಕ್ತಿ ಮುಖಂಡರು ಇತ್ತೀಚೆಗೆ ಮನವಿ ಸಲ್ಲಿಸಿದರು.
ಪಿಡಿಒ ಶಿವಕುಮಾರ ವಿರುದ್ಧ ಹಲವು ಆರೋಪಗಳಿಗೆ. ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ನಕಲಿ ದಾಖಲೆ ಸೃಷ್ಟಿಸಿ ಬಿಲ್ ಎತ್ತಿದ್ದಾರೆ. ಬಡವರಿಗೆ ಸರ್ಕಾರ ಜಾರಿ ಮಾಡಿದ ಬಸವ, ಇಂದಿರಾ, ಅಟಲ್‌ಜಿ ವಸತಿ ಸೇರಿ ವಿವಿಧ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲು ಫಲಾನುಭವಿಗಳಿಗೆ ಹಣ ಪಡೆಯುತ್ತಾರೆ. ಯೋಗ್ಯವಲ್ಲದ ಸ್ಥಳದಲ್ಲಿ ಗ್ರಾಮಸ್ಥರ ವಿರೋಧದ ನಡುವೆ ಗೋಡಾನ್ ನಿರ್ಮಿಸಿ ಅನುದಾನ ವ್ಯರ್ಥ ಮಾಡಿದ್ದಾರೆ.
ಸತತ ಮಳೆಯಿಂದ ಗ್ರಾಮೀಣ ಭಾಗದ ಮುಖ್ಯರಸ್ತೆ ಹಾಗೂ ಒಳ ರಸ್ತೆಗಳು ಹಾಳಾಗಿದ್ದರೂ, ಮರಂ ಹಾಕಲು ನಿರ್ಲಕ್ಷ್ಯ ಮಾಡಿದ್ದಾರೆ. ರಸ್ತೆಗೆ ಮರಂ ಹಾಕುವಂತೆ ಗ್ರಾಮಸ್ಥರು ಹಲವು ಸಲ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಕೂಡಲೇ ಭ್ರಷ್ಟಾಚಾರದಲ್ಲಿ ಭಾಗಿಯಾದ ಹೇಮನಾಳ ಗ್ರಾಪಂ ಪಿಡಿಒ ಶಿವಕುಮಾರ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಗ್ರಾಪಂಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಸ್ತಾನಿ ನಾಯಕ ಖಾನಾಪುರ, ಸಂಗಮೇಶ ನಾಯಕ, ಬಾಷಾ ಸಾಬ್ ಖಾನಾಪುರ, ಅನಿಲ್‌ಕುಮಾರ, ಹಾಜಿಸಾಬ್, ತಮ್ಮಣ್ಣ ಸ್ವಾಮಿ, ಮಲ್ಲಯ್ಯ ಸ್ವಾಮಿ, ಬಸಲಿಂಗಪ್ಪ ಅಗಸಿಮನಿ, ಶಿವಕುಮಾರ, ಮಲ್ಲಿಕಾರ್ಜುನ ಇದ್ದರು.